ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ ನಡೆಸಲ್ಪಡುವ ಉಜಿರೆಯ ರತ್ನಮಾನಸ ಜೀವನ ಶಿಕ್ಷಣ ವಸತಿ ನಿಲಯಕ್ಕೆ ಹೊಸದಾಗಿ ಸೇರ್ಪಡೆಗೊಂಡ 8ನೇ ತರಗತಿಯ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಪ್ರವೇಶೋತ್ಸವ ಕಾರ್ಯಕ್ರಮ ಜೂ 7 ರಂದು ನಡೆಯಿತು.
8 ನೇ ತರಗತಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳನ್ನು ಶಂಖ, ಜಾಗಟೆ ಮೂಲಕ ಗೌರವಯುತವಾಗಿ ಬರಮಾಡಿಕೊಂಡು ಪ್ರವೇಶದ್ವಾರದಲ್ಲಿ ಅವರ ಕಾಲು ತೊಳೆದು, ಹಣೆಗೆ ತಿಲಕವಿರಿಸಿ, ಮಂಗಳಾರತಿ ಬೆಳಗಿ ಪೂರ್ಣಕುಂಭ ಸ್ವಾಗತದಿಂದ ನಿಲಯದ ಹಿರಿಯ ವಿದ್ಯಾರ್ಥಿಗಳು ಬೆಲ್ಲ ನೀರು ನೀಡಿ ಪಾಲಕರು ಹಾಗೂ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ವಸತಿ ನಿಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಿಲಯದ ಶಿಕ್ಷಕ ರವಿಚಂದ್ರ ಪ್ರಸ್ತಾವಿಸಿ, ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಿ ಅವರಿಗೆ ಜೀವನ ಮೌಲ್ಯ ಕಲಿಸುವುದೇ ನಿಲಯದ ಮುಖ್ಯ ಉದ್ದೇಶವೆಂದು ನುಡಿದರು. ಗಣ್ಯ ಅತಿಥಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ದರು. ನಿಲಯ ಪಾಲಕ ಯತೀಶ್ ಕೆ. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರತ್ನಮಾನಸದ ಹಿರಿಯ ವಿದ್ಯಾರ್ಥಿ ನಿವೃತ್ತ ಕೃಷಿ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ್,ಎಸ್, ಕೆ.ಡಿ. ಆರ್ ಡಿ.ಪಿ ನಿರ್ದೇಶಕ ಚಂದ್ರಶೇಖರ ಶೆಟ್ಟಿ,ಬ್ಯಾಂಕ್ ಒಫ್ ಬರೋಡದ ಉಜಿರೆ ಶಾಖಾಧಿಕಾರಿ ಸುಖೇಶ್ ಪಿ.,ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನಕುಮಾರ್,ಉಜಿರೆ ಎಸ್ .ಡಿ.ಎಂ. ಸೆಕೆಂಡರಿ ಶಾಲಾ ಮುಖ್ಯ ಶಿಕ್ಷಕ ಪದ್ಮರಾಜು, ಎಸ್ ಡಿ.ಎಂ. ಡಿ ಎಡ್ ಕಾಲೇಜಿನ ಮಂಜು ಉಪಸ್ಥಿತರಿದ್ದು ಶುಭಾಶಂಸನೆಗೈದರು.
ರತ್ನಮಾನಸದ 5೦ನೇ ವರ್ಷದಲ್ಲಿ 8ನೇ ತರಗತಿಗೆ 84 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ,ಮುಖ್ಯ ಅತಿಥಿಗಳು ವಿದ್ಯಾರ್ಥಿಗಳು ಡ್ರಗ್ಸ್, ದುಶ್ಚಟಗಳಿಂದ ತಮ್ಮ ಭವಿಷ್ಯ ಹಾಳುಮಾಡಿಕೊಳ್ಳದೆ ಗುರುಕುಲದಲ್ಲಿ ಉತ್ತಮ ಸಂಸ್ಕಾರದಿಂದ ಜೀವನ ಶಿಕ್ಷಣ ಕಲಿತು ಬದುಕಿಗೆ ದಾರಿ ತೋರಿ ಜೀವ ನ ರೂಪಿಸುವ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶದ ಸತ್ಪ್ರಜೆಯಾಗಿ ರೂಪುಗೊಳ್ಳಬೇಕೆಂದು ನುಡಿದು ಶುಭ ಹಾರೈಸಿದರು. ಹಿರಿಯ ವಿದ್ಯಾರ್ಥಿ ಹರ್ಷವರ್ಧನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಆದರ್ಶ್ ಎಂ.ಸ್ವಾಗತಿಸಿದರು.