ಬೆಳ್ತಂಗಡಿ: ರಾಷ್ಟ್ರದೆಲ್ಲಡೆ ಸುದ್ದಿಯಾಗಿದ್ದ ಉಜಿರೆ ಖಾಸಗಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ(17) ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಹೊಸ ತಿರುವು 11 ವರ್ಷಗಳ ನಂತರ ಸಿಬಿಐ ವಿಶೇಷ ಕೋರ್ಟಿನಿಂದ ತೀರ್ಪು ಪ್ರಕಟಗೊಂಡಿದ್ದು, ಆರೋಪಿ ಸಂತೋಷ್ ರಾವ್ ನಿರಪರಾಧಿಯೆಂದು ಸಿಬಿಐ ನ್ಯಾಯಾಲಯವು ಆದೇಶಿಸಿದೆ. ಇನ್ನೆರಡು ದಿನಗಳಲ್ಲಿ ಮರು ವಿಚಾರಣೆ ನಡೆಸುವಂತೆ ತಿಳಿಸಿದೆ.
ಧರ್ಮಸ್ಥಳ ಪಾಂಗಾಳ ನಿವಾಸಿ ಸೌಜನ್ಯ ಕಾಲೇಜು ಮುಗಿಸಿ ಮನೆಗೆ ಹಿಂದಿರುಗುವಾಗ 9.10.2012ರಂದು ಸಂಜೆ ನಾಪತ್ತೆಯಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 10.10.2012ರಂದು ಧರ್ಮಸ್ಥಳದ ಮಣ್ಣಸಂಕದಲ್ಲಿ ಶವ ಪತ್ತೆಯಾಗಿದ್ದು, ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹೌಸಿಂಗ್ ಕಾಲೋನಿಯ ಸಂತೋಷ್ ರಾವ್ ಆರೋಪಿ ಎಂದು ಬಂಧಿಸಲಾಗಿತ್ತು.
ಈ ಬಗ್ಗೆ ರಾಜ್ಯ ಸರಕಾರ ಪ್ರಕರಣವನ್ನು ಸಿಐಡಿಗೆ ತನಿಖೆಗೆ ನೀಡಿದ್ದು, ತಾಲೂಕಿನಲ್ಲಿ ಪ್ರತಿಭಟನೆ ಹೆಚ್ಚಾದಂತೆ ಸರಕಾರ ಮತ್ತೆ ಕೇಂದ್ರ ಸಿಬಿಐ ನಡೆಸಲು ಆದೇಶ ನೀಡಿತ್ತು. ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ. ಆರೋಪಿ ಸಂತೋಷ್ ರಾವ್ ಬೆಂಗಳೂರು ಸಿಬಿಐ ಕೋರ್ಟ್ ಗೆ ಕಳೆದ ಆರು ಬಾರಿಗೂ ಹೆಚ್ಚು ಹಾಜರಾಗದೆ ತಲೆಮರಿಸಿಕೊಂಡಿದ್ದ. ಹೀಗಾಗಿ ಜೂ.16ರಂದು ಖುದ್ದು ಹಾಜರಾಗಲು ಸಮಸ್ಸ್ ನೀಡಿತ್ತು ಅದರಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದು ಇದೀಗ ಆರೋಪಿಯು ದೋಷಮುಕ್ತನೆಂದು ನ್ಯಾಯಾಲಯ ಆದೇಶಿಸಿದೆ.