ಉಜಿರೆ: ವೃತ್ರಾಸುರನು ದೇವತೆಗಳನ್ನು ಸೋಲಿಸಿದಾಗ ದೇವತೆಗಳು ಒಂದಾಗಿ ಶ್ರೀ ಮಹಾವಿಷ್ಣುವಿಗೆ ಶರಣಾಗಿ ಅಸುರನ ಮರ್ದನಕ್ಕೆ ಮೊರೆಹೋಗುತ್ತಾರೆ. ಆಗ ಶ್ರೀ ಮಹಾವಿಷ್ಣುವು ಶಂಖ, ಚಕ್ರ ಚಿನ್ಹೆಯನ್ನು ಧಾರಣೆ ಮಾಡಿ ಯುದ್ಧಕ್ಕೆ ಹೋಗಲು ದೇವತೆಗಳಿಗೆ ಆದೇಶಿಸುತ್ತಾನೆ. ವೈಷ್ಣವ ಚಿಹ್ನೆಯಾದ ಶಂಖ ,ಚಕ್ರ ಚಿನ್ಹೆ ಧಾರಣೆ ಮಾಡಿ ದೇವತೆಗಳು ಯುದ್ಧದಲ್ಲಿ ವೃತ್ರಾಸುರನನ್ನು ಜಯಿಸಿದರು. ವೈಷ್ಣವ ಚಿಹ್ನೆ ಧಾರಣೆ ಶತ್ರು ಜಯಕ್ಕೆ ಸಂಕೇತ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ನುಡಿದರು.
ಅವರು ಜೂ 29 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಕೀರ್ತಿಶೇಷ ವಿಜಯರಾಘವ ಪಡುವೆಟ್ನಾಯರು ಹಾಕಿಕೊಟ್ಟ ಸನ್ಮಾರ್ಗ ಹಾಗು ಪ್ರತಿವರ್ಷದಂತೆ ದೇವಸ್ಥಾನ ಹಾಗು ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ವತಿಯಿಂದ ನಡೆದ ಆಷಾಢ ಪ್ರಥಮೈಕಾದಶೀ ಪ್ರಯುಕ್ತ ಸುದರ್ಶನ ಹವನ ದಲ್ಲಿ ಶ್ರೀ ಮಹಾವಿಷ್ಣುವಿನ ಚಿಹ್ನೆಯಾದ ಶಂಖ,ಚಕ್ರವನ್ನು ಅಭಿಮಂತ್ರಿಸಿ ಭಕ್ತಾದಿಗಳ ತೋಳುಗಳಿಗೆ ಮುದ್ರಾಧಾರಣೆ ಮಾಡಿ ,ಬಳಿಕ ಮಾಧ್ಯಮ ಪ್ರತಿನಿಧಿಯೊಂದಿಗೆ ತಪ್ತಮುದ್ರಾಧಾರಣೆಯ ಮಹತ್ವವನ್ನು ತಿಳಿಸಿದರು. ವೈಜ್ಞಾನಿಕವಾಗಿಯೂ ,ಆಧ್ಯಾತ್ಮಿಕವಾಗಿಯೂ ಮುದ್ರಾಧಾರಣೆ ಮಾಡುವುದರಿಂದ ದೈಹಿಕ ಹಾಗು ಮಾನಸಿಕವಾಗಿ ಅರೋಗ್ಯ ಪಡೆಯಲು ಸಹಕಾರಿಯಾಗುವುದು. ಸಂಚಯಿತ ಪಾಪ ಕರ್ಮಗಳು ದೂರವಾಗುವುದೆಂಬ ನಂಬಿಕೆಯಿದೆ. ಅದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುವುದು . ಅಬಾಲವೃದ್ಧರೂ ಮುದ್ರಾಧಾರಣೆ ಹಾಕಿಸಿಕೊಳ್ಳುವುದರಿಂದ ಆರೋಗ್ಯಪೂರ್ಣರಾಗುವರೆಂಬ ವಿಶ್ವಾಸವಿದೆ. ಶ್ರೀ ಹರಿ (ಮಹಾವಿಷ್ಣು ) ಇಂದಿನಿಂದ ನಾಲ್ಕು ತಿಂಗಳ ಕಾಲ ಯೋಗ ನಿದ್ರೆಯಲ್ಲಿ ತೊಡಗುವುದರಿಂದ ಇಂದು ಶಯನೀ ಏಕಾದಶಿ ಎಂದು ವಿಶೇಷ ಮಹತ್ವ ಪಡೆದಿದೆ ಎಂದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಶ್ರೀಗಳವರನ್ನು ಭಕ್ತಿ ಗೌರವದಿಂದ ಸ್ವಾಗತಿಸಿ,ಬರಮಾಡಿಕೊಂಡರು. ಶ್ರೀಗಳವರು ಶ್ರೀ ಜನಾರ್ದನ ಸ್ವಾಮಿ ಹಾಗೂ ಪರಿವಾರ ದೇವರು ಮತ್ತು ಶ್ರೀ ಮಧ್ವಾಚಾರ್ಯ ಸನ್ನಿಧಿಯ ದರ್ಶನ ಪಡೆದರು. ವೇದಮೂರ್ತಿ ಶ್ರೀಪತಿ ಎಳಚಿತ್ತಾಯರು ಸುದರ್ಶನ ಹವನ ಧಾರ್ಮಿಕ ವಿಧಿ ನೆರವೇರಿಸಿದರು. ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಮತ್ತು ಪರಾರಿ ವೆಂಕಟ್ರಮಣ ಹೆಬ್ಬಾರ್ ಭಕ್ತಾದಿಗಳ ಮುದ್ರಾಧಾರಣೆಗೆ ವ್ಯವಸ್ಥೆಗೈದರು. ತಾಲೂಕಿನ ಸುಮಾರು 5೦೦ಕ್ಕೂ ಹೆಚ್ಚು ಭಕ್ತಾದಿಗಳು ಜಾತಿ,ಮತ ಭೇದವಿಲ್ಲದೆ ಶ್ರೀಗಳವರಿಂದ ಮುದ್ರಾಧಾರಣೆ ಹಾಕಿಸಿಕೊಂಡರು.