ನಡ : ಮಕ್ಕಳ ಓದು ಹಾಗೂ ಬರಹವನ್ನು ಉತ್ತೇಜಿಸುವ ಉದ್ದೇಶದಿಂದ ಸರಕಾರಿ ಪ್ರೌಢಶಾಲೆ ನಡ ಇಲ್ಲಿನ ಮಕ್ಕಳ ಸೃಜನಶೀಲತೆಯ ಪ್ರತೀಕವಾಗಿ “ಮಕ್ಕಳ ವಾಣಿ” ಮಾಸಿಕ ಪತ್ರಿಕೆಯ ಬಿಡುಗಡೆಯನ್ನು ಬೆಳ್ತಂಗಡಿಯ ಹಿರಿಯ ಪತ್ರಕರ್ತ ಶಿಬಿ ಧರ್ಮಸ್ಥಳ ರವರು ಜು.19 ರಂದು ಬಿಡುಗಡೆಗೊಳಿಸಿದರು.
ಸರಕಾರಿ ಪ್ರೌಢಶಾಲೆ ನಡದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಶಿಬಿ ಧರ್ಮಸ್ಥಳ ಇವರು “ಮಕ್ಕಳು ಓದುವ ಅಭ್ಯಾಸ ರೂಢಿಸಿಕೊಂಡಾಗ, ಬರೆಯಲು ಸಾಧ್ಯ. ಓದುವ ಮೂಲಕ ಶಬ್ಧ ಭಂಡಾರವನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ಬರವಣಿಗೆಯ ಕಲೆ ಉತ್ತಮಪಡಿಸಬಹುದು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಲಾ ಪತ್ರಿಕೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ ಶಿಬಿ ಧರ್ಮಸ್ಥಳ ಅವರು ನಡ ಪ್ರೌಢಶಾಲೆಯ ಸಾಧನೆ ರಾಜ್ಯಕ್ಕೇ ಮಾದರಿಯಾಗಿದೆ ಎಂದರು. ಶಾಲಾ ಮುಖ್ಯಶಿಕ್ಷಕ ಯಾಕೂಬ್ ಎಸ್. ಮಾತಾಡಿ ಮಕ್ಕಳ ಸೃಜನಶೀಲತೆಗೆ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿ ಇದೊಂದು ವಿನೂತನ ಪ್ರಯೋಗವಾಗಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ಸುಧಾಕರ ಇವರು ವಹಿಸಿದ್ದು ಇದೊಂದು ಮಾದರಿ ಪ್ರಯೋಗವಾಗಿದೆ ಎಂದರು.
ಸಮಾರಂಭದಲ್ಲಿ ಮಾತಾಡಿ ಪತ್ರಿಕೆಯ ಹಿಂದಿರುವ ಶ್ರಮದ ಬಗ್ಗೆ ಶಿಕ್ಷಕರಾದ ಶಿವಪುತ್ರ ಸುಣಗಾರ ವಿವರಿಸಿದರು. ಶಿಕ್ಷಕ ಮೋಹನ ಬಾಬು ಹಾಗೂ ಶಿಕ್ಷಕಿಯರುಗಳಾದ ಶ್ರೀಮತಿ ಸುಜಯ ಬಿ, ಶ್ರೀಮತಿ ಶೋಭಾ ಎಸ್, ಶ್ರೀಮತಿ ಜಯಂತಿ ಸ್ಟ್ರೆಲ್ಲಾ ಹಾಗೂ ಕುಮಾರಿ ಫಾತಿಮತ್ ಮಿಶ್ರಿಯಾ ಉಪಸ್ಥಿತರಿದ್ದರು.
ಶಾಲಾ ಉಪನಾಯಕ ಹೃತಿಕ್ ಸ್ವಾಗತಿಸಿ, ಕುಮಾರಿ ಸಾನ್ವಿ ಧನ್ಯವಾದವಿತ್ತರು.