ಧರ್ಮಸ್ಥಳ: ಕು. ಸೌಜನ್ಯ ಸಾವಿನ ಪ್ರಕರಣ ಸರಕಾರ ಮತ್ತು ತನಿಖಾ ಸಂಸ್ಥೆಯ ವ್ಯಾಪ್ತಿಯಲ್ಲಿ ಇರುವುದರಿಂದ ಸೂಕ್ತ ನ್ಯಾಯ ಒದಗಿಸುವರೇ ಒತ್ತಾಯಿಸುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
2012ರಲ್ಲಿ ನಡೆದ ಪಾಂಗಳ ಗ್ರಾಮದ ನಿವಾಸಿ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯಳ ಹತ್ಯೆಯ ಪ್ರಕರಣದಲ್ಲಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಹೊರಬರುವಂತೆ ಸಿ.ಐ.ಡಿ. ನಂತರದಲ್ಲಿ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿ.ಬಿ.ಐ. ಮೂಲಕ ತನಿಖೆ ನಡೆಸುವಂತೆ ಸರಕಾರವನ್ನು ಶ್ರೀಕ್ಷೇತ್ರದ ಪರವಾಗಿ ಮತ್ತು ನಮ್ಮ ಕುಟುಂಬಸ್ಥರ ಪರವಾಗಿ ಒತ್ತಾಯಿಸಲಾಗಿತ್ತು ಹಾಗು ಅದರಂತೆ ಸರ್ಕಾರ ಸದರಿ ಪ್ರಕರಣವನ್ನು ಸಿ.ಬಿ.ಐ. ತನಿಖೆ ನಡೆಸಲು ಆದೇಶಿಸಿರುತ್ತದೆ. ಅದರಂತೆ ತನಿಖೆ ನಡೆಸಿ ಸದರಿ ಇಲಾಖೆ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ.
ನಂತರದಲ್ಲಿ ಮಾನ್ಯ ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿತನನ್ನು ಸದರಿ ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದು ತಿಳಿದಿದೆ. ಆ ನಂತರದಲ್ಲಿ ಕೆಲವು ವ್ಯಕ್ತಿಗಳು ಶ್ರೀ ಕ್ಷೇತ್ರವನ್ನು ಹಾಗು ನಮ್ಮ ಕುಟುಂಬವನ್ನು ಗುರಿಯಾಗಿರಿಸಿಕೊಂಡು ಸುಳ್ಳು ಆರೋಪ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಇದರಿಂದ ಶ್ರೀಕ್ಷೇತ್ರದ ಭಕ್ತರಲ್ಲಿ ಹಾಗು ಕ್ಷೇತ್ರದೊಂದಿಗೆ ತೊಡಗಿಸಿಕೊಂಡಿರುವ ಅನೇಕರಿಗೆ ಖೇದ ಉಂಟಾಗಿದ್ದು ಈ ಮೂಲಕ ಸಮಸ್ತ ಭಕ್ತಾದಿಗಳಲ್ಲಿ ಹಾಗೂ ಸಾರ್ವಜನಿಕರ ಗಮನಕ್ಕೆ ತರ ಬಯಸುವುದೆಂದರೆ ಈ ಪ್ರಕರಣದ ಬಗ್ಗೆ ಶ್ರೀ ಕ್ಷೇತ್ರದ ವತಿಯಿಂದ ಈಗಾಗಲೇ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು ಹಾಗೂ ಅದರಂತೆ ಸರ್ಕಾರ ಸದರಿ ಪ್ರಕರಣವನ್ನು ಸಿ.ಬಿ.ಐ. ತನಿಖೆ ನಡೆಸಲು ಆದೇಶಿಸಿರುತ್ತದೆ. ಆ ಪ್ರಕಾರ ಸರ್ಕಾರ ಅತ್ಯುನ್ನತ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿ ನ್ಯಾಯಾಲಯಕ್ಕೆ ಪ್ರಕರಣವನ್ನು ವಿಚಾರಣೆಗಾಗಿ ಒಳಪಡಿಸಿರುತ್ತದೆ. ಪ್ರಸ್ತುತ ಸದರಿ ವಿಚಾರವು ನ್ಯಾಯಾಲಯ, ಸರ್ಕಾರ ಮತ್ತು ತನಿಖಾ ಸಂಸ್ಥೆಯ ವ್ಯಾಪ್ತಿಯಲ್ಲಿ ಇರುವುದರಿಂದ ಕು. ಸೌಜನ್ಯಳ ಸಾವಿಗೆ ಸಂಬಂಧಿಸಿದಂತೆ ಮಾನ್ಯ ಸರ್ಕಾರ ಹಾಗು ತನಿಖಾ ಸಂಸ್ಥೆ ಸೂಕ್ತ ನ್ಯಾಯ ಒದಗಿಸಿ ಕೊಡುವರೇ ಒತ್ತಾಯಿಸುತ್ತೇನೆ.
ಈ ಬಗ್ಗೆ ಕ್ರಮ ಕೈಗೊಳ್ಳುವರೇ ಸರ್ಕಾರವನ್ನು ಒತ್ತಾಯಿಸುತ್ತೇನೆ. ಹಾಗು ಕ್ಷೇತ್ರದ ಬಗ್ಗೆ ಅವಹೇಳನಕಾರಿ, ಸುಳ್ಳು ಹೇಳಿಕೆ, ಆಪಾದನೆ, ವದಂತಿಗಳನ್ನು ಹಬ್ಬಿಸುತ್ತಿರುವುದರ ಬಗ್ಗೆ ಭಕ್ತಾದಿಗಳು ಹಾಗು ಸಾರ್ವಜನಿಕರು ಗೊಂದಲಕ್ಕೆ ಈಡಾಗಬಾರದಾಗಿ ವಿನಂತಿಸುತ್ತೇನೆ.