ಉಜಿರೆ: ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ಹತ್ತಿರ ಬಾಲಕಿ ಸೌಜನ್ಯಾರನ್ನು ಹತ್ಯೆ ಮಾಡಿದ ನೈಜ ಆರೋಪಿಯನ್ನು ಪತ್ತೆ ಹಚ್ಚಿ ಶಿಕ್ಷಿಸುವ ಕುರಿತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಮಸ್ತ ನಾಗರಿಕರ ಪರವಾಗಿ ಘನ ಕರ್ನಾಟಕ ಸರಕಾರದಲ್ಲಿ ಮಾಡುತ್ತಿರುವ ಹಕ್ಕೊತ್ತಾಯ ಮನವಿಯನ್ನು ಆ.4 ರಂದು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರಿಗೆ ಮನವಿ ನೀಡಲಾಯಿತು.
ಸುಮಾರು 11 ವರ್ಷಗಳ ಹಿಂದೆ 2012 ಅಕ್ಟೋಬರ್ ನಲ್ಲಿ ಧರ್ಮಸ್ಥಳದ ಸಮೀಪ ಧರ್ಮಸ್ಥಳ ನಿವಾಸಿ ಕು| ಸೌಜನ್ಯಾರವರ ಭೀಕರ ಹತ್ಯೆಯಾಗಿ, ಈ ಕುರಿತಂತೆ ಕೈಗೊಂಡ ತನಿಖಾ ಕ್ರಮಗಳು ಮತ್ತು ನಡೆದ ಘಟನಾವಳಿಗಳು ತಮ್ಮ ಘನ ಸರಕಾರದ ಗಮನದಲ್ಲಿ ಇದೆ ಎಂದು ಭಾವಿಸುತ್ತೇವೆ. ಈ ಪ್ರಕರಣದ ಆರೋಪಿ ಎಂದು ಗುರುತಿಸಲಾದ ವ್ಯಕ್ತಿಯೋರ್ವರ ಮೇಲಿನ ಆರೋಪಗಳನ್ನು ಇತ್ತೀಚೆಗೆ ಸಂಬಂಧಪಟ್ಟ ನ್ಯಾಯಾಲಯವು ಸೂಕ್ತ ಸಾಕ್ಷ್ಯಗಳ ಕೊರತೆಯಿಂದಾಗಿ ಖುಲಾಸೆ ಮಾಡಿರುವುದು ತಮಗೂ ಗೊತ್ತಿರುವ ವಿಚಾರವಾಗಿದೆ. ಈ ಘಟನೆಯಲ್ಲಿ ಸೂಕ್ತ ನ್ಯಾಯವನ್ನು ದೊರಕಿಸಿಕೊಡಲಾರದ್ದಕ್ಕೆ ನಾಗರಿಕ ಸಮಾಜವು ದುಃಖಿತವಾಗಿದೆ ಮತ್ತು ಆಕ್ರೋಶಗೊಂಡಿದೆ. ತಮ್ಮ ಆಕ್ರೋಶವನ್ನು ಹೊರಹಾಕಲು ಸಮೂಹ ಮಾಧ್ಯಮಗಳ ಮೂಲಕ ಮತ್ತು ಚಳುವಳಿಗಳನ್ನು ನಡೆಸುತ್ತಿರುವುದು ತಮ್ಮ ಗಮನಕ್ಕೂ ಬಂದಿರಬಹುದು, ಈ ಬರ್ಬರ ಘಟನೆಯ ಆರೋಪಿಯನ್ನು ಪತ್ತೆಹಚ್ಚಿ, ಶಿಕ್ಷೆಗೊಳಪಡಿಸುವ ಜವಾಬ್ದಾರಿ ತಮ್ಮ ಘನ ಸರಕಾರದ ಮೇಲೆ ಇದೆ. ಆದುದರಿಂದ ಈ ಪ್ರಕರಣಕ್ಕೆ ಆದ್ಯತೆಯನ್ನು ನೀಡಿ, ಈ ಕುರಿತಂತೆ ಬಂದಿರುವ ತನಿಖಾ ವರದಿಗಳನ್ನು ಪರಿಶೀಲಸಿ, ನ್ಯಾಯಾಲಯದ ತೀರ್ಪನ್ನು ಪರಿಶೀಲಿಸಿ, ನಿರ್ದಿಷ್ಟ ಅವಧಿಯೊಳಗೆ ತೆಗೆದುಕೊಳ್ಳಬೇಕಾದ ಕಾನೂನು ಕ್ರಮಗಳನ್ನು ತೆಗೆದುಕೊಂಡು, ಮೃತ ಬಾಲಕಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸುತ್ತೇವೆ.
ಪ್ರಕರಣದಲ್ಲಿ ಅನೇಕರು ತಮ್ಮ ಅಭಿಪ್ರಾಯಗಳನ್ನು, ತಮಗೆ ಗೊತ್ತಿರುವ ವಿಚಾರಗಳನ್ನು ಸಮೂಹ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವುದನ್ನು ತಮ್ಮ ಘನ ಸರಕಾರವು ಈಗಾಗಲೇ ಗಮನಿಸಿರಬಹುದು. ಅದರಲ್ಲಿಯೂ ವ್ಯಕ್ತಿಯೋರ್ವರು ಸಂವಿಧಾನದ ಬಗ್ಗೆಯೂ ನಂಬಿಕೆಯಿಲ್ಲವೆಂದೂ, ದೇಶದ ಪ್ರಧಾನಮಂತ್ರಿಗಳು ಮತ್ತು ಮುಖ್ಯಮಂತ್ರಿಗಳನ್ನು ಟೀಕಿಸಿದ್ದಲ್ಲದೇ ಅವಹೇಳನಕಾರಿಯಾಗಿ ವಂಚಿಸಿದ್ದಾರೆ. ಅಲ್ಲದೇ ಸಂವಿಧಾನದ ಬಗ್ಗೆಯೂ ಅವಹೇಳನಕಾರಿಯಾಗಿ ಚಿತ್ರಿಸಿರುವುದು ತಮ್ಮ ಗಮನಕ್ಕೆ ಬಂದಿರುತ್ತದೆ. ಸಮೂಹ ಮಾಧ್ಯಮಗಳಲ್ಲಿ ಈ ಪ್ರಕರಣದ ಕುರಿತಂತೆ ಗ್ರಹಿಸಿಕೊಂಡಿರುವ ಹೊಸ ಹೊಸ ವಿಚಾರಗಳನ್ನು ವ್ಯಕ್ತಪಡಿಸುತ್ತಿರುವ ವ್ಯಕ್ತಿಗಳನ್ನು ತಮ್ಮ ಘನ ಸರಕಾರವು ವಿಚಾರಣೆಗೆ ಒಳಪಡಿಸಿ, ಅವರ ಹೇಳಿಕೆಗಳಿಗೆ ಸಾಕ್ಷ್ಯಗಳನ್ನು ಪಡಕೊಂಡು, ಆ ಸಾಕ್ಷ್ಯಗಳ ಆಧಾರದಲ್ಲಿ ಪ್ರಕರಣದ ಸತ್ಯಶೋಧನೆಯನ್ನು ಮಾಡಬೇಕೆಂದು ಆಗ್ರಹಿಸುತ್ತೇವೆ. ಅಲ್ಲದೇ ಸಂವಿಧಾನದ ಮೇಲೆ ಅಪನಂಬಿಕೆಯನ್ನು ವ್ಯಕ್ತಪಡಿಸುತ್ತಿರುವ ವ್ಯಕ್ತಿಗಳ ಮೇಲೆ ತಾವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ. ಈ ಕುರಿತಂತೆ, ಸಮೂಹ ಮಾಧ್ಯಮಗಳ ಮುಖೇನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ವ್ಯಕ್ತಿಗಳಲ್ಲಿ ಲಭ್ಯವಿರುವ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸುತ್ತಿದ್ದೇವೆ.
ಈ ಪ್ರಕರಣದಲ್ಲಿ ಕೆಲವು ವ್ಯಕ್ತಿಗಳು ಸಮೂಹ ಮಾಧ್ಯಮಗಳ ಮುಖಾಂತರ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು, ಹೆಗ್ಗಡೆಯವರ ಕುಟುಂಬ ವರ್ಗದವರನ್ನು ಧರ್ಮಸ್ಥಳ ಗ್ರಾಮವನ್ನು, ಕ್ಷೇತ್ರದಲ್ಲಿರುವ ದೈವದೇವರುಗಳನ್ನು ಹೀಯಾಳಿಸುವುದು, ನಿಂದಿಸುವುದು, ಅವಹೇಳನಕಾರಿಯಾಗಿ ಮಾತನಾಡುವುದು, ತನ್ಮುಖೇನ ಜನರಲ್ಲಿ ಕ್ಷೇತ್ರದ ಬಗ್ಗೆಯೂ ಮತ್ತು ಮುಖ್ಯವಾಗಿ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಮೇಲೆಯೂ ಗೊಂದಲವುಂಟಾಗುವಂತೆ ಸುಳ್ಳು ಪ್ರಚಾರಗಳನ್ನು ಉಂಟುಮಾಡುವುದು, ಇದರಿಂದ ಜನರು ತಪ್ಪು ತಿಳುವಳಿಕೆಯನ್ನು ಪಡೆಯುತ್ತಿರುವುದು ನಮಗೆಲ್ಲರಿಗೂ ಆಕ್ರೋಶವನ್ನು ತಂದಿದೆ. ಕ್ಷೇತ್ರ ಧರ್ಮಸ್ಥಳವು ನಮಗೆಲ್ಲರಿಗೂ ನಂಬಿಕೆಯ ತಾಣವಾಗಿದೆ. ನಾವು ಕರಾವಳಿಯ ಜನರು ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರನ್ನು ‘ಮಾತನಾಡುವ ಮಂಜುನಾಥ’ ಎಂದೇ ಭಾವಿಸಿದ್ದೇವೆ. ಸದ್ರಿ ಪ್ರಕರಣದಲ್ಲಿ ಖುದ್ದು ಹೆಗ್ಗಡೆಯವರೇ ಮಾಧ್ಯಮಗಳ ಮುಖಾಂತರ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹಿಸಿರುವುದಲ್ಲದೇ, ಯಾವ ಆರೋಪಿಯನ್ನೂ ರಕ್ಷಿಸುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿರುತ್ತಾರೆ. ಹೀಗಿದ್ದರೂ, ಕೆಲವು ವ್ಯಕ್ತಿಗಳು ಶ್ರೀ ವೀರೇಂದ್ರ ಹೆಗ್ಗಡೆಯವರನ್ನು, ಅವರು ನಡೆಸುತ್ತಿರುವ ಅಂಗ ಸಂಸ್ಥೆಗಳನ್ನು ಮತ್ತು ಅವರ ಅನುಯಾಯಿಗಳನ್ನು ನಿಂದಿಸುತ್ತಿರುವುದು ಮುಂದಕ್ಕೆ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗುವ ಸಾಧ್ಯತೆಗಳೂ ಇವೆ. ನಿಂದನೆ, ಅವಹೇಳನೆ ಮಾಡುತ್ತಿರುವ ವ್ಯಕ್ತಿಗಳನ್ನು ತಮ್ಮ ಘನ ಸರಕಾರವು ವಿಚಾರಣೆ ಮಾಡಿ, ಅವರಲ್ಲಿ ಶ್ರೀ ವೀರೇಂದ್ರ ಹೆಗ್ಗಡೆಯವರ ಬಗೆಗಾಗಲೀ, ಅವರು ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವ ಬಗೆಗಾಗಲೀ ಯಾವುದಾದರೂ ಸಾಕ್ಷ್ಯಗಳಿದ್ದರೆ, ಅವುಗಳನ್ನು ಪಡಕೊಂಡು ಮುಂದುವರಿಯಬೇಕೆಂದು ಆಗ್ರಹಿಸುತ್ತೇವೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ, ಸುಳ್ಳು ಆರೋಪಗಳನ್ನು ಮಾಡಿದಲ್ಲಿ, ರಾಜ್ಯದ ಕಾನೂನು ಪಾಲನೆ ಹಿತದೃಷ್ಟಿಯಿಂದ, ಅಂತಹ ವ್ಯಕ್ತಿಗಳನ್ನು ಸುಳ್ಳು ಆರೋಪ ಮಾಡದಂತೆ ನಿಗ್ರಹಿಸಬೇಕೆಂದು ನಾವು ಆಗ್ರಹಿಸುತ್ತೇವೆ. ತಮ್ಮ ಘನ ಸರಕಾರವು ಸಾರ್ವಜನಿಕವಾಗಿ ಮತ್ತು ಸಮೂಹ ಮಾಧ್ಯಮಗಳ ಮುಖಾಂತರ ಸುಳ್ಳು ಆರೋಪಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆಂದು ಹೇಳಿರುವುದು ನಮ್ಮ ಗಮನಕ್ಕೆ ಬಂದಿದ್ದು, ಇದನ್ನು ಸ್ವಾಗತಿಸುತ್ತೇವೆ. ಈ ಪ್ರಕರಣದಲ್ಲಿಯೂ ಸುಳ್ಳು ಆರೋಪಗಳನ್ನು ಮಾಡುತ್ತಿರುವವರ ವಿರುದ್ಧ ಅವರ ಆರೋಪಗಳು ಸುಳ್ಳಾಗಿದ್ದಲ್ಲಿ, ಸಾಕ್ಷ್ಯಗಳು ಇಲ್ಲದಿದ್ದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಮನವಿ ನೀಡಿದರು.
ಈ ಸಂದರ್ಭದಲ್ಲಿ ಮೂಡಬಿದ್ರೆ ಮಾಜಿ ಸಚಿವ ಅಭಯಚಂದ್ರ, ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉಜಿರೆ ಜನಾರ್ದನ ದೇವಸ್ಥಾನ ದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಂದರ ಗೌಡ ಇಚ್ಚಿಲ, ಶ್ರೀ ಧರ್ಮಸ್ಥಳ ಯೋಜನೆಯ ಕಾರ್ಯನಿರ್ವಾಹಕ ಡಾ| ಎಲ್.ಹೆಚ್ ಮಂಜುನಾಥ್, ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್ ಹಾಗೂ ಲಯನ್ಸ್ ಅಧ್ಯಕ್ಷ ಜಯರಾಜ್ ಹೊಸಕೋಟೆ, ಧರ್ಮಸ್ಥಳ ಸುಬ್ರಹ್ಮಣ್ಯ ಪ್ರಸಾದ್, ಕಾಸಿಂ ಮಲ್ಲಿಗೆ ಮನೆ ಮನವಿ ಸಲ್ಲಿಸಿದರು.