ಕುತ್ಲೂರು : ಕಳೆದ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಪ್ರವಾಸೋದ್ಯಮ ಇಲಾಖೆ ಹಳ್ಳಿಗಳಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ರಾಷ್ಟ್ರ ಮಟ್ಟದ ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿ ಎಂಬ ಸ್ಪರ್ಧೆಯನ್ನು ಘೋಷಿಸಿತ್ತು. ಪ್ರಾಕೃತಿಕ ಸೌ೦ದರ್ಯದ ಜೊತೆ ಪ್ರವಾಸೋದ್ಯಮಕ್ಕೆ ಅನುಕೂಲಕರವಾಗಿರುವ ಕುತ್ಲೂರು ಗ್ರಾಮವು ಈ ಸ್ಪರ್ಧೆಗೆ ಪ್ರವೇಶಿಸಿದ್ದು ಇದೀಗ ಜಿಲ್ಲಾ ಮಟ್ಟದಲ್ಲಿ ಅಂಗೀಕಾರ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕುತ್ಲೂರು ಗ್ರಾಮವು ರಾಜ್ಯ ಹೆದ್ದಾರಿ 37 ರ ನಡುವೆ ಇದ್ದು ಧರ್ಮಸ್ಥಳ ವೇಣೂರು ಉಡುಪಿ ಹಾಗೂ ಮೂಡಬಿದಿರೆಯ೦ತಹ ಪ್ರೇಕ್ಷಣೀಯ ಸ್ಥಳಗಳಿಗೆ ಈ ಹೆದ್ದಾರಿ ಮೂಲಕ ಪ್ರವಾಸಿಗರು ಪ್ರಯಾಣಿಸುತ್ತಿದ್ದು ಹಾಗೂ ಕುತ್ಲೂರು ಅರಣ್ಯ ಪ್ರದೇಶದಿಂದ ಆವೃತವಾಗಿದ್ದು ಅರ್ಬಿ ಜಲಪಾತವು ಪ್ರಮುಖ ಆಕರ್ಷಣೆಯಾಗಿದೆ. ಸ್ಥಳೀಯರಾದ ಸಂದೀಪ್ ಪೂಜಾರಿಯವರು ಇನ್ಫೋಸಿಸ್ ಉದ್ಯೋಗಿ ಹಾಗೂ ಸ್ಥಳೀಯರಾದ ಹರೀಶ್ ಸಾಲ್ಯಾನ್ ರವರ ಸಹಾಯದಿಂದ ಡಾಕ್ಯುಮೆಂಟ್ ಸಿದ್ಧಪಡಿಸಿ ಸ್ಪರ್ಧೆಗೆ ಪ್ರವೇಶಿಸಿದ್ದು ಇದೀಗ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಅಂಗೀಕಾರಗೊ೦ಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಮುಂದೆ ರಾಜ್ಯ ಮಟ್ಟದಲ್ಲಿ ಆಯ್ಕೆಯಾಗುವ ಹಳ್ಳಿಗಳು ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾಗಲಿದ್ದು ಕುತ್ಲೂರು ಗ್ರಾಮವು ರಾಷ್ಟ್ರ ಮಟ್ಟದಲ್ಲಿ ಕೂಡ ಸ್ಥಾನ ಪಡೆಯಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.