ಪುಂಜಾಲಕಟ್ಟೆ: ಕಳೆದ 15 ವರ್ಷಗಳ ನಿರಂತರ ಸೇವೆಗೈದು ಪ್ರಸ್ತುತ ಸ್ವ ಇಚ್ಛಾ ವರ್ಗಾವಣೆ ಬಯಸಿ ಬೆಳ್ತಂಗಡಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿಂದಿ ಭಾಷಾ ಶಿಕ್ಷಕಿಯಾಗಿ ವರ್ಗಾವಣೆಗೊಂಡಿರುವ ಶ್ರೀಮತಿ ಪದ್ಮಜಾ ಎಂ. ಹಾಗೂ 8 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿ ಅನಿವಾರ್ಯ ಕಾರಣದಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹನುಮಂತ ನಗರ ಪ್ರೌಢಶಾಲೆಗೆ ವರ್ಗಾವಣೆಯಾಗಿ ತೆರಳುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರಾದ ಸತ್ಯಕಿರಣ ಕುಮಾರ ಇವರಿಬ್ಬರ ಬೀಳ್ಕೊಡುಗೆ ಸಮಾರಂಭವು ಇತ್ತೀಚೆಗೆ ಕರ್ನಾಟಕ ಪಬ್ಲಿಕ್‌ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಈ ಸಂಸ್ಥೆಗೆ ಸರಕಾರಿ ಪ್ರೌಢಶಾಲೆ ಪದ್ಮುಂಜದಿಂದ ಆಗಮಿಸಿರುವ ಚಿತ್ರಕಲಾ ಶಿಕ್ಷಕರಾದ ಸದಾನಂದ ಬಿರಾದಾರ್, ಸರಕಾರಿ ಪ್ರೌಢಶಾಲೆ ವೇಣೂರಿನಿಂದ ಆಗಮಿಸಿರುವ ಕಲಾ ಶಿಕ್ಷಕರಾದ ಶ್ರೀಮತಿ ಭವಾನಿ, ಸರಕಾರಿ ಪ್ರೌಢಶಾಲೆ ಪಡಂಗಡಿಯಿಂದ ಆಗಮಿಸಿರುವ ಹಿಂದಿ ಭಾಷಾ ಶಿಕ್ಷಕಿ ಶ್ರೀಮತಿ ಕುಮುದಾ ಎಮ್, ಸರಕಾರಿ ಪ್ರೌಢಶಾಲೆ ಗೇರುಕಟ್ಟೆ ಇಲ್ಲಿಂದ ಆಗಮಿಸಿರುವ ಗಣಿತ ಶಿಕ್ಷಕಿ ಶ್ರೀಮತಿ ಜಯಂತಿ ಕೆ, ಸರಕಾರಿ ಪ್ರೌಢಶಾಲೆ ಕಕ್ಕಿಂಜೆಯಿಂದ ಆಗಮಿಸಿರುವ ದೈಹಿಕ ಶಿಕ್ಷಣ ಶಿಕ್ಷಕರಾದ ಮೋಹಾನಂದ ಹಾಗೆಯೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಸರಕಾರಿ ಪ್ರೌಢಶಾಲೆ ಶೆಟ್ಟಿಹಳ್ಳಿಯ ವಿಜ್ಞಾನ ಶಿಕ್ಷಕಿಯಾದ ಕುಮಾರಿ ಸುಧಾ ಮೂಡಬಿದ್ರೆ ಇವರನ್ನು ವೈಶಿಷ್ಟ್ಯಪೂರ್ಣವಾಗಿ ಸ್ವಾಗತಿಸಲಾಯಿತು.
ಈ ಸರಳ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಪ್ರಾಂಶುಪಾಲ ಉದಯ ಕುಮಾರ್ ಬಿ ವಹಿಸಿಕೊಂಡು ಸಭೆಯನ್ನು ಮುನ್ನಡೆಸಿದರು. ಈ ಸಮಾರಂಭದಲ್ಲಿ ಬೀಳ್ಕೊಡುತ್ತಿರುವ ಇಬ್ಬರ ಬಗ್ಗೆ ಶಿಕ್ಷಕರುಗಳಾದ ರಾಧಿಕಾ ನಾಯಕ್, ಶಾಂತಾ ಎಸ್, ಹರಿಪ್ರಸಾದ್ ಆರ್, ಮೋಹಾನಂದ, ಜಯಂತಿ ಕೆ. ಪ್ರವೀಣ್ ಕುಮಾರ್ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಸುರೇಶ್ ಶೆಟ್ಟಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸದಸ್ಯ ದಿವಾಕರ ಶೆಟ್ಟಿ ಕಂಗಿತ್ತಿಲು ಇವರು ಬೀಳ್ಕೊಡುತ್ತಿರುವ ಶಿಕ್ಷಕರಿಗೆ ಸ್ಮರಣಿಕೆಯೊಂದಿಗೆ ಗೌರವ ಸಲ್ಲಿಸಿದರು. ಗಣಿತ ಶಿಕ್ಷಕರಾದ ಗೋಪಾಲ್ ಸ್ವಾಗತಿಸಿದರು., ವಿಜ್ಞಾನ ಶಿಕ್ಷಕ ನಿರಂಜನ್ ಜೈನ್ ಐ ಧನ್ಯವಾದ ಸಲ್ಲಿಸಿದರು. ಕಲಾ ಶಿಕ್ಷಕರಾದ ಧರಣೇಂದ್ರ ಕೆ. ನಿರೂಪಿಸಿದರು.