ಪಟ್ರಮೆ ಅನಾರು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರ ಕೊರತೆ: ಶಾಲಾ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ಇಲ್ಲಂದತಹ ಪರಿಸ್ಥಿತಿ: ಮಕ್ಕಳನ್ನು ಶಾಲೆಗೆ ಕಳುಹಿಸದೇ ಪೋಷಕರ ಪ್ರತಿಭಟನೆ

Suddi Udaya

ಪಟ್ರಮೆ: ಪಟ್ರಮೆಯ ಅನಾರು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ಶಾಲಾ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ಇಲ್ಲಂದತಹ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷಗಳ ಹಿಂದೆ ಕೊಠಡಿಗಳ ಕೊರತೆಯಿಂದಾಗಿ ಬಳಲುತ್ತಿದ್ದ ಈ ಶಾಲೆ ಊರ ಪರವೂರ ಸಹೃದಯಿಗಳ ಸಹಕಾರದಿಂದ ಕೊಠಡಿಗಳ ಕೊರತೆ ನೀಗಿತ್ತು. ಇದೀಗ ಮತ್ತೆ ಈ ಶಾಲೆ ಸಮಸ್ಯೆಗೊಳಗಾಗಿದೆ. ಇದರಿಂದಾಗಿ ನೊಂದ ಪೋಷಕರು ಕಳೆದ ಜುಲೈ 14 ರಂದು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಶಾಲಾವತಿಯಿಂದ ಹಾಗೂ ಊರಿನವರ ವತಿಯಿಂದ ಬೇರೆ, ಬೇರೆ ಮನವಿ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಒಂದು ವಾರದೊಳಗೆ ಬದಲಿ ವ್ಯವಸ್ಥೆ ಮಾಡಿಕೊಡುವುದಾಗಿ ಅಧಿಕಾರಿಗಳು
ಭರವಸೆ ನೀಡಿದ್ದರು. ಆದರೆ ಇದುವರೆಗೂ ಅಧಿಕೃತ ಶಿಕ್ಷಕರು ಶಾಲೆಗೆ ಒದಗಿಸಿಲ್ಲ. ಇದರಿಂದ ಆಕ್ರೋಶಗೊಂಡ ಪೋಷಕರು ಶಿಕ್ಷಕರಿಲ್ಲದೆ ಮಕ್ಕಳಿಗೆ ಪಾಠವೂ ಇಲ್ಲ ಜೊತೆಗೆ ಮಕ್ಕಳನ್ನು ನೋಡಿಕೊಳ್ಳುವವರೂ ಇಲ್ಲ. ಹೀಗಾದರೆ ಯಾವ ಧೈರ್ಯದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಶಾಲೆಗೆ ಶಿಕ್ಷಕರನ್ನು ಒದಗಿಸದೇ ಇದ್ದಲ್ಲಿ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಆ.14ರಂದು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನದ ವೇಳೆ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರಾದ ಧನಂಜಯ್ ಗೌಡರವರ ಜೊತೆಗೆ ಮಾತುಕತೆ ನಡೆಸಿದ್ದಾರೆ.

ಪಟ್ರಮೆಯ ಅನಾರು ಏಕೈಕ ಹಿರಿಯ ಪ್ರಾಥಮಿಕ ಶಾಲೆ ಇದೀಗ ಸರ್ಕಾರದ ಎಡವಟ್ಟಿನಿಂದ ಸಮಸ್ಯೆ ಎದುರಿಸುತ್ತಿದೆ. ತುರ್ತು ಕ್ರಮ ಕೈಗೊಳ್ಳದೇ ಹೋದರೆ ಮಕ್ಕಳಿಲ್ಲದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಶಾಲೆ ಎಂಬ ಅಪಖ್ಯಾತಿಗೆ ಒಳಗಾಗುವ ಪ್ರಸಂಗ ಅನಾರು ಶಾಲೆಗೆ ಎದುರಾಗಲಿದ್ದು ಈ ಸಂಕಷ್ಟದಿಂದ ಶಾಲೆಯು ಯಾವ ರೀತಿ ಪಾರಾಗಲಿದೆ ಎಂದು ಕಾದುನೋಡಬೇಕಿದೆ.

Leave a Comment

error: Content is protected !!