ವೇಣೂರು ಸರಕಾರಿ ಶಾಲೆ ಸ್ಥಳಾಂತರದ ಬಗ್ಗೆ ಹಳೆ ವಿದ್ಯಾರ್ಥಿಗಳ ವಿಚಾರ ವಿನಿಮಯ ಸಭೆ: ಕುಂದುಕೊರತೆ ನೀಗಿಸಲು ಹಳೆವಿದ್ಯಾರ್ಥಿಗಳಿಂದ ಸಹಾಯ ಯಾಚಿಸಲು ನಿರ್ಧಾರ

Suddi Udaya

ವೇಣೂರು: ಇಲ್ಲಿಯ ಸರಕಾರಿ ಪ್ರೌಢಶಾಲೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡುವ ಬಗ್ಗೆ ಹಳೆ ವಿದ್ಯಾರ್ಥಿಗಳ ಸಮಾಲೋಚನಾ ಸಭೆಯು ಇಂದು ಇಲ್ಲಿಯ ಸರಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಜರಗಿತು.


ಶಾಲೆಗೆ ಸರಕಾರದಿಂದ ಅನುದಾನ ಮಂಜೂರುಗೊಂಡು ನೂತನ ಕಟ್ಟಡ ನಿರ್ಮಾಣವಾಗಿದ್ದು, ಶಾಲೆಯ ಸ್ಥಳಾಂತರದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.


ನೂತನ ಕಟ್ಟಡದಲ್ಲಿ ಕೇವಲ ಎಂಟು ಕೊಠಡಿಗಳಷ್ಟೇ ಇದ್ದು, ಮಕ್ಕಳ ಸಂಖ್ಯೆಗನುಗುಣವಾಗಿ ಇನ್ನಷ್ಟು ತರಗತಿ ಕೊಠಡಿಗಳು, ಶಿಕ್ಷಕರ ಮತ್ತು ಕಚೇರಿ ಕೊಠಡಿ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯಗಳು ಮುಂತಾದ ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆ ಸಭೆಯನ್ನು ಚರ್ಚೆ ನಡೆಯಿತು.


ಶಾಲೆಯ ಉಪಪ್ರಾಚಾರ್ಯರಾದ ವೆಂಕಟೇಶ್ ಎಸ್. ತುಳುಪುಳೆ ಅವರು ಮಾತನಾಡಿ, ಶಾಲೆಯಲ್ಲಿ ಪ್ರಸ್ತುತ 3 ತರಗತಿಗಳಲ್ಲಿ 600 ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಇದು ತಾಲೂಕು ಮಾತ್ರವಲ್ಲದೆ ಜಿಲ್ಲೆಯಲ್ಲೇ ಸರಕಾರಿ ಶಾಲೆಯ ಅತ್ಯಧಿಕ ಮಕ್ಕಳಿರುವ ಶಾಲೆಯಾಗಿದೆ. ಇಲ್ಲಿ ವರ್ಷಕ್ಕಿಂತ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಮೂಲಸೌಲಭ್ಯಗಳ ಕೊರತೆ ಎದುರಾಗಿದೆ. ಶಾಲೆಯ ಪೂರ್ಣ ತರಗತಿಗಳನ್ನು ಸ್ಥಳಾಂತರ ಮಾಡಲೂ ಸಾಧ್ಯವಾಗುತ್ತಿಲ್ಲ ಎಂದರು.


ಸರಕಾರದಿಂದ ಅನುದಾನದ ಬೇಡಿಕೆ ಇಡುವುದರ ಜತೆಗೆ, ವಿವಿಧ ಸಂಘ ಸಂಸ್ಥೆಗಳು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಿಸಿ ನೂತನ ಕಟ್ಟಡದಲ್ಲಿ ಮೂಲಸೌಲಭ್ಯಗಳನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡುವ ಬಗ್ಗೆ ನಿರ್ಧರಿಸಲಾಯಿತು.


ಇದೇ ಸಂದರ್ಭದಲ್ಲಿ ಶಿಕ್ಷಕ ವ್ರಂದದವರು ಹಾಗೂ ಹಲವು ಹಿರಿಯ ವಿದ್ಯಾರ್ಥಿಗಳು ದೇಣಿಗೆಯನ್ನು ಶಾಲೆಗೆ ಹಸ್ತಾಂತರಿಸಿದರು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಗೀತ ಶಿಕ್ಷಕಿ ಅನುಸೂಯ ಪಾಟಕ್ ಪ್ರಾರ್ಥಿಸಿ, ಜ್ಯೋತಿ ಜ್ಯುಲಿಯೆಟ್ ಸ್ವಾಗತಿಸಿದರು. ಶಿಕ್ಷಕ ರವೀಂದ್ರ ಅವರು ಪ್ರಾಸ್ತಾವಿಸಿ, ವಂದಿಸಿದರು.

Leave a Comment

error: Content is protected !!