ನಾಗರಪಂಚಮಿ ಹಬ್ಬಗಳ ತಿಂಗಳಾಗಿರುವ ಶ್ರಾವಣಮಾಸದಲ್ಲಿ ಬರುವ ಮೊದಲನೇ ಹಬ್ಬ. ನಾಗರಪಂಚಮಿಯನ್ನು ಶ್ರಾವಣ ಶುಕ್ಲ ಪಂಚಮಿಯಂದು (2023 ರಲ್ಲಿ ಆಗಸ್ಟ್ 21, ಸೋಮವಾರ) ಆಚರಿಸಲಾಗುತ್ತದೆ. ಈ ದಿನದಂದು ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ, ಹೊಸ ಬಟ್ಟೆ-ಅಲಂಕಾರವನ್ನು ಧರಿಸಿ, ನಾಗ ದೇವರನ್ನು ಪೂಜಿಸಿ, ನಾಗ ದೇವರಿಗೆ ಹಾಲಿನ ನೈವೇದ್ಯವನ್ನು ಅರ್ಪಿಸುತ್ತಾರೆ.
ನಾಗಗಳ ಪೂಜೆಯನ್ನು ಮಾಡುವುದರಿಂದ ಸರ್ಪಭಯ ಉಳಿಯುವುದಿಲ್ಲ ಮತ್ತು ವಿಷಬಾಧೆಯಾಗುವ ಸಂಕಟ ತಪ್ಪುತ್ತದೆ ಎಂದು ಭಕ್ತರ ಬಲವಾದ ನಂಬಿಕೆಯಿದೆ. ನಾಗರಪಂಚಮಿಯ ಇತಿಹಾಸ, ಅಂದು ಏನು ಮಾಡಬೇಕು, ಏನು ಮಾಡಬಾರದು, ಇವೆಲ್ಲವುಗಳ ಹಿಂದಿರುವ ಶಾಸ್ತ್ರ ಇಲ್ಲಿ ನೀಡುತ್ತಿದ್ದೇವೆ.
ಉಪವಾಸದಿಂದ ಶಕ್ತಿ ಹೆಚ್ಚಾಗಿ ಅದರ ಫಲವೂ ಲಭಿಸುತ್ತದೆ. ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. ನಾಗಗಳ ಪೂಜೆ ಅಂದರೆ ಸಗುಣ ರೂಪದಲ್ಲಿರುವ ಶಿವನ ಪೂಜೆಯೇ. ಆದುದರಿಂದ ಆ ದಿನ ವಾತಾವರಣದಲ್ಲಿರುವ ಶಿವ-ಲಹರಿಗಳು ಆಕರ್ಶಿತಗೊಂಡು ಆ ಜೀವಕ್ಕೆ ಇತರ ೩೬೪ ದಿನಗಳ ಕಾಲ ಉಪಯುಕ್ತವಾಗುತ್ತವೆ.
ಸ್ತ್ರೀಯರು ನಾಗ ದೇವರಿಗೆ ಪೂಜೆ ಸಲ್ಲಿಸುವುದರಿಂದ ಅವರಿಗೆ ಶಕ್ತಿ ತತ್ತ್ವ ಪ್ರಾಪ್ತವಾಗುತ್ತದೆ. ಸ್ತ್ರೀಯರು ನಾಗ ದೇವರಿಗೆ ಪೂಜೆ ಸಲ್ಲಿಸುವುದರಿಂದ ಅವರ ಸಹೋದರನ ಆಯುಷ್ಯ ವೃದ್ಧಿಯಾಗುತ್ತದೆ. ಹೊಸ ಬಟ್ಟೆ ಮತ್ತು ಅಲಂಕಾರ ಧರಿಸಿ, ಇದರಿಂದ ಆನಂದ ಮತ್ತು ಚೈತನ್ಯದ ಲಹರಿಗಳು ಆಕರ್ಷಿಸಲ್ಪಡುತ್ತವೆ.
ಸ್ತ್ರೀಯರು ಉಯ್ಯಾಲೆಯಲ್ಲಿ ಆಡಬೇಕು, ಇದರಿಂದ ಕ್ಷಾತ್ರಭಾವ ಮತ್ತು ಭಕ್ತಿಭಾವ ಹೆಚ್ಚಾಗಿ ಅದರಿಂದ ಸಾತ್ತ್ವಿಕತೆಯ ಲಹರಿಗಳು ಲಭಿಸುತ್ತವೆ.
ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಿಸುವಂತಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣಗಳ ಶುದ್ಧಿಯಾಗಲಿ.
ನಾಗರ ಪಂಚಮಿಯಂದು ಸಹೋದರಿಯ ಮೊರೆಯು ಈಶ್ವರನು ಆಲಿಸುತ್ತಾನೆ. ಆದುದರಿಂದ ಸಹೋದರಿಯು ತನ್ನ ಸಹೋದರನ ಉನ್ನತಿಗಾಗಿ ದೇವರಲ್ಲಿ ಕಳಕಳಿಯಿಂದ ಮುಂದಿನಂತೆ ಪ್ರಾರ್ಥಿಸಬೇಕು ದೇವರೇ, ನನ್ನ ಸಹೋದರನಿಗೆ ಸದ್ಬುದ್ಧಿ, ಶಕ್ತಿ ಮತ್ತು ಸಾಮರ್ಥ್ಯವನ್ನು ದಯಪಾಲಿಸಿ?.
ನಾಗರಪಂಚಮಿಯಂದು ಇವನ್ನು ಮಾಡದಿರಿ
ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯುವುದು ಕೂಡ ನಿಷೇಧಿಸಲಾಗಿದೆ. ನಾಗದೇವರು ಇಚ್ಛೆಗೆ ಸಂಬಂಧಿಸಿದ ಕನಿಷ್ಠ ದೇವತೆಯಾಗಿದ್ದಾರೆ. ನಾಗರಪಂಚಮಿಯಂದು ವಾಯುಮಂಡಲದಲ್ಲಿ ನಾಗದೇವತೆಯ ತತ್ತ್ವದ ಪ್ರಮಾಣವು ಹೆಚ್ಚಿರುತ್ತದೆ. ಹೆಚ್ಚುವುದು, ಕೊಯ್ಯುವುದು, ಭೂಮಿ ಉಳುವುದು ಮುಂತಾದ ಕೃತಿಗಳಿಂದ ರಜ-ತಮಕ್ಕೆ ಸಂಬಂಧಿಸಿದ ಇಚ್ಛಾಲಹರಿಗಳು ವಾಯುಮಂಡಲದಲ್ಲಿ ಹೊರಸೂಸುವ ಪ್ರಮಾಣವು ಹೆಚ್ಚಾಗುವುದರಿಂದ ಈ ದಿನದಂದು ನಾಗದೇವತೆಯ ಲಹರಿಗಳಿಗೆ ತಮ್ಮ ಕಾರ್ಯ ಮಾಡುವಲ್ಲಿ ಅಡಚಣೆಗಳು ಬರಬಹುದು. ಈ ಕಾರಣದಿಂದ ನಾಗರಪಂಚಮಿಯಂದು ಹೆಚ್ಚುವುದು, ಕರಿಯುವುದು, ಉಳುಮೆ, ಹೊಲಿಗೆ ಮುಂತಾದ ಕೃತಿಗಳನ್ನು ಮಾಡುವುದರಿಂದ ಪಾಪ ತಗಲಬಹುದು.
-ಕೃಪೆ: ಸನಾತನ ಸಂಸ್ಥೆ