ಕು| ಸೌಜನ್ಯ ಕೊಲೆ ಪ್ರಕರಣ: ಎಸ್.ಐ.ಟಿ ತನಿಖೆಗೆ ಆಗ್ರಹ: ಆ.28ರಂದು ಬೆಳ್ತಂಗಡಿಯಲ್ಲಿ ರಾಜ್ಯ ಮಟ್ಟದ ‘ಚಲೋ ಬೆಳ್ತಂಗಡಿ ಮಹಾ ಧರಣಿ’: ವಿರೋಧಿ ಶಕ್ತಿಗಳ ಸುಳ್ಳು ಸುದ್ದಿಗಳಿಗೆ, ವದಂತಿಗಳಿಗೆ ಯಾರೂ ಕಿವಿಗೊಡಬೇಡಿ

Suddi Udaya

ಬೆಳ್ತಂಗಡಿ: ಕು| ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರೊಬ್ಬರ ಸುಪರ್ದಿಯಲ್ಲಿ ಎಸ್.ಐ.ಟಿ ತನಿಖೆ ನಡೆಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ವೇದಿಕೆ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆ.28ರಂದು ಬೆಳಗ್ಗೆ 10 ಗಂಟೆಯಿಂದ ರಾಜ್ಯ ಮಟ್ಟದ ‘ಚಲೋ ಬೆಳ್ತಂಗಡಿ ಮಹಾ ಧರಣಿ’ ನಡೆಯಲಿದೆ ಎಂದು ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ವೇದಿಕೆ ದ.ಕ ಜಿಲ್ಲಾ ಸಮಿತಿ ಗೌರವ ಸಂಚಾಲಕ ಕೆ. ವಸಂತ ಬಂಗೇರ ಹೇಳಿದರು.


ಅವರು ಆ.22ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸೌಜನ್ಯ ಪ್ರಕರಣ ಆರಂಭದಿದಿಂದಲೂ ಹಳಿತಪ್ಪಿದ ರೈಲುದಾರಿಯಂತಾಗಿದೆ. ಅಮಾಯಕ ಸಂತೋಷ್ ರಾವ್ ಎಂಬಾತನ ಆರೋಪಿಯನ್ನಾಗಿಸಿ ಕೈತೊಳೆದುಕೊಂಡ ಪೋಲೀಸರ ಕ್ರಮ ಹಾಗೂ ಸಿಓಡಿ ಅಧಿಕಾರಿಗಳ ನಡೆ ಇಂದು ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಮತ್ತು ಇದರಿಂದಲೇ ಆಗ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿವಿ ಸದಾನಂದ ಗೌಡ ಸರಕಾರದಲ್ಲಿ ನಮಗೆ ನಂಬಿಕೆ ಇಲ್ಲದಂತಾಗಿದೆ ಎಂದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಆಗ್ರಹಿಸಿ ನಡೆದ ಹೋರಾಟದ ಪರಿಣಾಮ 2013 ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರದಲ್ಲಿ ನಾನು ಶಾಸಕರಾಗಿದ್ದು, ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು ಎಂದರು.


ಆದರೆ ಪರಿಣಾಮಕಾರಿಯಾಗಿ ನಡೆಯುತ್ತಿದ್ದ ತನಿಖೆಯನ್ನು ತಡೆಯಲು ಎಂಬಂತೆ ಸಿಬಿಐ ಅಧಿಕಾರಿಗಳ ಬದಲಾಯಿಸಿ ತನಿಖೆಯ ಹಳಿ ತಪ್ಪಿಸಿರುವುದು ಇಂದು ನಮಗೆಲ್ಲ ತಿಳಿದಿರುವ ಬಹಿರಂಗ ಸತ್ಯ, ಆದ್ದರಿಂದ ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಬಿಐಯಿಂದ ಪ್ರಕರಣವನ್ನು ಹಿಂಪಡೆದು ನಿವೃತ್ತ ನ್ಯಾಯಾದೀಶರೊಬ್ಬರ ಸುಪರ್ಧಿಯಲ್ಲಿ ಎಸ್.ಐ. ಟಿ ತನಿಖೆ ನಡೆಸಲು ಸರಕಾರ ಕ್ರಮಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಜೊತೆಗೆ ತಾಲೂಕಿನ ಅಸಹಜ ಸಾವುಗಳ ಮತ್ತು ಪತ್ತೆಯಾಗದ ಕೊಲೆಗಳ ನ್ಯಾಯಾಂಗ ತನಿಖೆ ನಡೆಸಿ ಈ ಸಾವು ಕೊಲೆಗಳಿಗೂ ಕಾರಣ ಹಾಗೂ ಆರೋಪಿಗಳ ಪತ್ತೆ ಮಾಡಲು ಸರಕಾರವನ್ನು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು.


ಸಿಬಿಐ ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖವಾದ ಕೆಲವು ಅಂಶಗಳು ಸೌಜನ್ಯ ಪ್ರಕರಣವನ್ನು ಮುಚ್ಚಿಹಾಕುವ ಶಡ್ಯಂತರ ನಡೆದಿದೆ ಎಂಬ ಅನುಮಾನಗಳು ಬಲಗೊಂಡಿವೆ. ತನಿಖಾಧಿಕಾರಿಗಳಿಗೆ ಚೀಮಾರಿ ಹಾಕಿರುವ ತೀರ್ಪು, ತನಿಖೆಯ ನಿರ್ಲಕ್ಷತನ, ಯಾರನ್ನೂ ಕಾಪಾಡಲು ಎಡವಿದ ತನಿಖೆ ಎಂಬುದನ್ನು ಗುರುತಿಸಿರುವುದು ಭಾಸವಾಗುತ್ತದೆ. ಇದರಿಂದ ಜನಾಕ್ರೋಶ ಎದುರಾಗಿ ರಾಜ್ಯದ ವಿವಿದೆಡೆ ಹೋರಾಟಗಳು ನಡೆಯುತ್ತಿವೆ. ಇದರ ಭಾಗವಾಗಿ ನ್ಯಾಯಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ವೇದಿಕೆ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆಗಸ್ಟ್ 28, ರಂದು ಬೆಳಿಗ್ಗೆ 10 ಗಂಟೆಯಿಂದ ರಾಜ್ಯ ಮಟ್ಟದ “ಚಲೋ ಬೆಳ್ತಂಗಡಿ ಮಹಾ ಧರಣಿ” ಕಾರ್ಯಕ್ರಮ ನಡೆಸಲಿದ್ದೇವೆ. ಕೆಲವು ಸೌಜನ್ಯಳಿಗೆ ನ್ಯಾಯ ಸಿಗಬಾರದೆಂದು ಇರುವ ಕೆಲವು ವಿರೋಧಿ ಶಕ್ತಿಗಳು ಆಗೋಸ್ತು 28ರಂದು ಬೆಳ್ತಂಗಡಿಯಲ್ಲಿ ಧರಣಿ ಇಲ್ಲ ಎಂದು ಸುಳ್ಳು ಪ್ರಚಾರ ಮಾಡುತ್ತಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.


ಆಗಸ್ಟ್ 28 ರಂದು ರಾಜ್ಯ ಮಟ್ಟದ ಹೋರಾಟ ಬೆಳ್ತಂಗಡಿಯಲ್ಲಿ ಚಲೋ ಬೆಳ್ತಂಗಡಿ ನಡೆಯಲಿದೆ ಹಾಗೂ ತಾಲೂಕು ಕಚೇರಿ ಮುಂಬಾಗ ಮಹಾಧರಣಿ ನಡೆಯಲಿದೆ ಎಂದು ಸ್ವಷ್ಟಪಡಿಸಿ, ಸುಳ್ಳು ಸುದ್ದಿಗಳಿಗೆ, ಸುಳ್ಳು ವದಂತಿಗಳಿಗೆ ಬಲಿಯಾಗದೆ ಸೌಜನ್ಯಳ ನ್ಯಾಯದ ನಿರೀಕ್ಷೆಯಲ್ಲಿರುವ ಎಲ್ಲಾ ಜನರು ದೊಡ್ಡ ಸಂಖ್ಯೆಯಲ್ಲಿ ಆ. 28 ರಂದು ಬೆಳ್ತಂಗಡಿಗೆ ಬಂದು ಮಹಾಧರಣಿಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯದ ಜನಪರ ಸಂಘಟನೆಗಳು ಹಾಗೂ ರಾಜ್ಯದ ಹಲವಾರು ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ನಡೆಸಲಿರುವ ‘ಚಲೋ ಬೆಳ್ತಂಗಡಿ’ ಮಹಾ ಧರಣಿಯಲ್ಲಿ ತಾಲೂಕಿನ ಜನಪರ ಸಂಘಟನೆಗಳು, ಸಮಾಜಸೇವಾ ಸಂಘಟನೆಗಳು ಎಲ್ಲರೂ ಭಾಗವಹಿಸಿ ಪ್ರಜ್ಞಾವಂತ ನಾಗರಿಕರು, ರೈತರು, ಕಾರ್ಮಿಕರು, ಶೋಷಿತರು, ದಲಿತರು, ಹಿಂದುಳಿದ ವರ್ಗದವರು, ಮಹಿಳೆಯರು, ವಿದ್ಯಾರ್ಥಿ ಯುವಜನರ ದೊಡ್ಡ ಸಂಖ್ಯೆಯಲ್ಲಿ ಧರಣಿಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ವೇದಿಕೆ ದ.ಕ ಜಿಲ್ಲಾ ಸಮಿತಿ ಸಂಚಾಲಕ ಹಾಗೂ ವಕೀಲರು ಮತ್ತು ಕಾರ್ಮಿಕ ಮುಖಂಡರಾದ ಬಿ.ಎಂ ಭಟ್, ತಣ್ಣೀರುಪಂತ ಗ್ರಾ.ಪಂ ಮಾಜಿ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ನ್ಯಾಯವಾದಿ ಮನೋಹರ ಇಳಂತಿಲ ಉಪಸ್ಥಿತರಿದ್ದರು.

Leave a Comment

error: Content is protected !!