ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ. ಕಾಲೇಜು ವಿದ್ಯಾರ್ಥಿನಿಯಾಗಿದ್ದ ಸೌಜನ್ಯಳ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಆಗ್ರಹಿಸಿ ಜನಪರ ಸಂಘಟನೆಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ, ಜಂಟಿ ಆಶ್ರಯದಲ್ಲಿ ಆ.28 ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಮಹಾಧರಣಿ ನಡೆಯಲಿದ್ದು, ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ನ್ಯಾಯಕ್ಕಾಗಿ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಎಂದು ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ಒಂಟಿ ವೇದಿಕೆ ಗೌರವ ಸಂಚಾಲಕರಾದ ಕೆ. ವಸಂತ ಬಂಗೇರ ಹೇಳಿದರು.
ಅವರು ಆ.26ರಂದು ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 2012 ಅ.9ರಂದು ಕೊಲೆಯಾದ ಸೌಜನ್ಯಳ ಪ್ರಕರಣದಲ್ಲಿ ಅಮಾಯಕ ಸಂತೋಷ್ ರಾವ್ ಅವರನ್ನು ಆರೋಪಿಯನ್ನಾಗಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಜನಾಕ್ರೋಷಗೊಂಡು ಸಿಡಿದೆದ್ದು ಹೋರಾಟಕ್ಕೆ ಇಳಿದಿರುವುದು ಈಗ ಇತಿಹಾಸ. ಆದರೆ ರಾಜ್ಯದ ಡಿವಿ ಸದಾನಂದ ಗೌಡರ ನೇತೃತ್ವದ ರಾಜ್ಯ ಸರಕಾರ ಸಿಓಡಿ ತನಿಖೆ ಮಾಡಿಸಿಯೂ ಸಂತೋಷ್ ರಾವ್‌ನೇ ಆರೋಪಿ ಎಂದು ಹಠ ಹಿಡಿದಾಗ ರಾಜ್ಯ ಸರಕಾರದ ಮೇಲೆ ವಿಶ್ವಾಸ ಕಳಕೊಂಡ ಜನತೆ ಸಿಬಿಐ ತನಿಖೆಗೆ ಆಗ್ರಹಿಸುತ್ತಾ ಹೋರಾಟ ನಡೆಸಿದ್ದಾಗಿತ್ತು. ಆ ಸಂದರ್ಭ ನಡೆದ ಚುನಾವಣೆಯಲ್ಲಿ ಗೆದ್ದು ಬಂದ ಸಿದ್ದಾರಾಮಯ್ಯ ನೇತೃತ್ವದ ರಾಜ್ಯ ಸರಕಾರ ಈಗಾಗಲೇ ನಡೆದಾಗಿದ್ದ ಸಿಓಡಿ ತನಿಖೆಯಲ್ಲಿ ನ್ಯಾಯ ಸಿಗದ ಕಾರಣ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು ಎಂದು ತಿಳಿಸಿದರು.
ವಿಧಾನ ಸಭೆಯಲ್ಲಿ ನಾನು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಧ್ವನಿ ಎತ್ತಿದ್ದು, ಪುತ್ತೂರು ಶಾಸಕರಾಗಿದ್ದ ಶಕುಂತಳ ಶೆಟ್ಟಿ ಅವರೂ ಧ್ವನಿಗೂಡಿಸಿದ್ದರು. ಆದರೆ ಪ್ರಕರಣ ನಡೆದು ಇಷ್ಟು ವರ್ಷವಾದರೂ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ವಿಧಾನ ಸಭೆಯಲ್ಲಿ ಈ ವಿಷಯವನ್ನೇ ಪ್ರಸ್ತಾಪ ಮಾಡಿಲ್ಲ, ಅಲ್ಲದೆ ಸಂಸದ ನಳಿನ್‌ಕುಮಾರ್ ಕಟೀಲ್ ಕೂಡಾ ಪಾರ್ಲಿಮೆಂಟ್‌ನಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿಲ್ಲ ಎಂದು ಬಂಗೇರ ಆರೋಪಿಸಿದರು.
ಪ್ರಕರಣವನ್ನು ಸಿಬಿಐಗೆ ವಹಿಸಿ 5 ತಿಂಗಳಲ್ಲಿ ಚುನಾವಣೆ ಬಂದು ಕೇಂದ್ರದಲ್ಲಿದ್ದ ಯುಪಿಎ ಸರಕಾರ ಸೋತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂತು, ಸಿಬಿಐ ತನಿಖೆ ನಿದಾನಗತಿಯಲ್ಲಿ ನಡೆಯುತ್ತಾ 11 ವರ್ಷ ಕಳೆದ ಮೇಲೆ ಸಿಬಿಐ ನ್ಯಾಯಾಲಯ ತನ್ನ ತೀರ್ಪು ನೀಡಿದಾಗ ಸಂತೋಷ್ ರಾವ್ ನಿರಪರಾಧಿ ಎಂಬುದು ಸಾಬೀತಾಗಿದೆ ವಿನಃ ನಿಜವಾದ ಆರೋಪಿಯ ಪತ್ತೆಗೆ ಸಿಬಿಐ ತನಿಖೆ ನಡೆಸಿಲ್ಲ ಎಂಬುದು ಕೂಡಾ ಸಾಬೀತಾಗಿದೆ ಆದುದರಿಂದ ನಮಗೆ ಕೇಂದ್ರ ಸರಕಾರದ ಮೇಲೆ ವಿಶ್ವಾಸ ಇಲ್ಲ, ರಾಜ್ಯ ಸರಕಾರ ನ್ಯಾಯಕೊಡಬೇಕು ಇದಕ್ಕಾಗಿ ನಾನು ನಿನ್ನೆ ಮುಖ್ಯಮಂತ್ರಿಯವರನ್ನು ಭೇಟಿ ಒತ್ತಾಯಿಸಿದ್ದೇನೆ ಎಂದರು.
ಈ ಎಲ್ಲಾ ಕಾರಣಗಳಿಂದ ಸಿಬಿಐ ನ್ಯಾಯಾಲಯ ಗುರುತು ಮಾಡಿದ್ದ ಲೋಪದೋಷಗಳನ್ನು ಗುರುತಿಸಿ ಅದಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ನಿಯೋಜನ ಮಾಡಿ ಪ್ರಕರಣದ ಮರುತನಿಖೆ ಮಾಡಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಈ ಪ್ರಕರಣದಲ್ಲಿ ಪೊಲೀಸರು, ವೈದ್ಯರು, ಅಧಿಕಾರಿಗಳನ್ನು ತನಿಖೆ ನಡೆಸಬೇಕ ಎಂದು ನಮ್ಮ ಒತ್ತಾಯವಾಗಿದೆ. ಜೊತೆಗೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ, ಅಪರಾದಿಗಳು ಪತ್ತೆಯಾಗದ ಕೊಲೆಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೂಡಾ ಒತ್ತಾಯಿಸಲಿದ್ದೇವೆ. ಈ ಬೇಡಿಕೆಗಳನ್ನು ಈಗಾಗಲೇ ಬಹಿರಂಗ ಪಡಿಸಿದ್ದರೂ ಕೂಡಾ ಸೌಜನ್ಯಳ ನ್ಯಾಯದ ವಿರೋದಿಶಕ್ತಿಗಳು, ತಾಲೂಕಿನ ಕೊಲೆಗಳ ತನಿಖೆ ನಡೆಸುವುದುನ್ನು ವಿರೋಧಿಸುವವರು ಇಲ್ಲಸಲ್ಲದ ಆರೋಪ ನಾಡುತ್ತಿರುತ್ತಾರೆ. ನಮ್ಮ ಹೋರಾಟ ಸೌಜನ್ಯಳಿಗೆ ನ್ಯಾಯ ದೊರಕಿಸುವುದಕ್ಕೆ ಮತ್ತು ಪತ್ತೆಯಾಗದ ಕೊಲೆಗಳ ಅಪರಾದಿಗಳ ಪತ್ತೆಗೆ ತನಿಖೆ ನಡೆಸಿ ನ್ಯಾಯ ಪಡೆಯುವುದಕ್ಕೆ ಎಂದು ಹೇಳುತ್ತಿದ್ದರೂ, ಹೋರಾಟಗಾರರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುವ ದುರುದ್ದೇಶ ಏನು ? ಹೋರಾಟಗಾರರು ಧರ್ಮಸ್ಥಳ ದೇವಸ್ಥಾನಕ್ಕೆ ಅಣ್ಣಪ್ಪ ಸ್ವಾಮಿಯ ವಿರೋದಿಗಳು ಎಂದು ಬಿಂಬಿಸುವ ದುರುದ್ದೇಶ ಏನು ? ಎಂಬುದನ್ನು ಟೀಕೆ ಮಾಡುವವರು ಪ್ರಸ್ತುತ ಪಡಿಸಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ಜಂಟಿ ವೇದಿಕೆಯ ಸಂಚಾಲಕ ಬಿ.ಎಂ ಭಟ್ ಮಾತನಾಡಿ, ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯ ದೊರೆಯಬೇಕು ಎಂದು ಹೋರಾಟ ಮಾಡುವವರನ್ನು ಅನುಮಾನದಿಂದ ನೋಡುವ, ನಿಂದಿಸುವ ಕೆಲಸವಾಗುತ್ತಿದೆ. ಇದಕ್ಕೆ ಕಾರಣ ಏನು ? ಇದು ಜನರನ್ನು ದಾರಿತಪ್ಪಿಸುವ ಪ್ರಯತ್ನವಾಗಿದೆ. ಸೌಜನ್ಯ ಕೊಲೆ ಆರೋಪಿಗಳು ಪತ್ತೆಯಾಗಬೇಕು ಎಂದು ಹೋರಾಟ ಮಾಡಿದರೆ, ಧರ್ಮಸ್ಥಳ ಕ್ಷೇತ್ರಕ್ಕೆ ಹೇಗೆ ಅವಮಾನವಾಗುತ್ತದೆ ಇದು ಸೌಜನ್ಯ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಯಬಾರದು ಎಂಬ ದುರುದ್ದೇಶ ಹೊಂದಿದಂತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಸತೀಶ್ ಕಾಶಿಪಟ್ಣ, ನಾಗೇಶ್ ಕುಮಾರ್, ಜೆಡಿಎಸ್ ಪಕ್ಷದ ಮುಖಂಡ ಧರ್ಮರಾಜ್, ಸಿಪಿಐಎಂನ ಮುನಿರ್ ಕಾಟಿಪಳ್ಳ, ನ್ಯಾಯವಾದಿ ಮನೋಹರ ಇಳಂತಿಲ, ಡಿಎಸ್‌ಎಸ್ ಮುಖಂಡರಾದ ನೇಮಿರಾಜ ಕಿಲ್ಲೂರು, ವಸಂತ ಬಿ.ಕೆ, ಪ್ರಮುಖರಾದ ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ಜಯವಿಕ್ರಮ್ ಕಲ್ಲಾಪು, ನ್ಯಾಯವಾದಿ ಸಂತೋಷ್ ಕುಮಾರ್, ಬೊಮ್ಮಣ್ಣ ಗೌಡ, ಸಂತೋಷ್ ಬಿ.ಸಿ, ಆದಿತ್ಯ ಕೊಲ್ಲಾಜೆ ಮೊದಲಾದವರು ಉಪಸ್ಥಿತರಿದ್ದರು.