ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ. ಕಾಲೇಜು ವಿದ್ಯಾರ್ಥಿನಿಯಾಗಿದ್ದ ಸೌಜನ್ಯಳ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಎಸ್.ಐ.ಟಿ ತನಿಖೆಗೆ ಆಗ್ರಹಿಸಿ ಜನಪರ ಸಂಘಟನೆಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ, ಜಂಟಿ ಆಶ್ರಯದಲ್ಲಿ ಆ.28 ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಮಹಾಧರಣಿ ಆರಂಭಗೊಂಡಿದೆ.
ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ಜಂಟಿ ವೇದಿಕೆ ಗೌರವ ಸಂಚಾಲಕರಾದ ಕೆ. ವಸಂತ ಬಂಗೇರ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಚಾಲಕ ಬಿ.ಎಂ.ಭಟ್, ಮಹಿಳಾ ಹೋರಟಗಾರ್ತಿ ಕೆ.ನೀಲ, ಸಾಹಿತಿ ಮೀನಾಕ್ಷಿ ಬಾಳಿ, ಜನವಾದಿ ಮಹಿಳಾ ಸಂಘದ ಪ್ರಧಾನ ಕಾರ್‍ಯದರ್ಶಿ ದೇವಿ, ಯುವ ಜನ ಚಳುವಳಿಯ ನೇತಾರ ಮುನೀರ್ ಕಾಟಿಪಳ್ಳ, ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರಾದ ಸತೀಶ್ ಕಾಶಿಪಟ್ಣ, ನಾಗೇಶ್ ಗೌಡ, ಸಮುದಾಯ ಸಾಂಸ್ಕೃತಿ ಸಂಘಟನೆಯ ಸುರೇಂದ್ರ , ರಾಜ್ಯ ನಾಯಕಿ ಗೌರಮ್ಮ, ಸಿಪಿಐಎಂ ಮುಖಂಡ ಕೆ. ಯಾದವ ಶೆಟ್ಟಿ, ನ್ಯಾಯವಾದಿ ಮನೋಹರ ಇಳಂತಿಲ, ತಣ್ಣೀರುಪಂತ ಗ್ರಾ.ಪಂ. ಮಾಜಿ ಅಧ್ಯಕ್ಷ ಜಯವಿಕ್ರಮ , ಡಿ.ಎಸ್ಎಸ್ ಸಂಚಾಲಕ ನೇಮಿರಾಜ ಕಿಲ್ಲೂರು, ವಸಂತ ಬಿ.ಕೆ, ಚಂದು ಎಲ್ ಮೊದಲಾದವರು ಉಪಸ್ಥಿತರಿದ್ದರು.
ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಸಿಬಿಐ ತನಿಖೆಯಲ್ಲಿ ಸಂತೋಷ್ ರಾವ್ ನಿರಾಪರಾಧಿ ಎಂದು ಆದೇಶವಾಗಿದ್ದು, ಸಿಬಿಐ ನ್ಯಾಯಾಲಯ ಗುರುತು ಮಾಡಿದ್ದ ಲೋಪದೋಷಗಳನ್ನು ಗುರುತಿಸಿ ಅದಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ನಿಯೋಜನ ಮಾಡಿ ಪ್ರಕರಣದ ಮರುತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿ ಈ ಧರಣಿ ನಡೆಸಲಾಗುತ್ತಿದೆ.
ಈ ಪ್ರಕರಣದಲ್ಲಿ ಪೊಲೀಸರು, ವೈದ್ಯರು, ಅಧಿಕಾರಿಗಳನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಜೊತೆಗೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ, ಅಪರಾಧಿಗಳು ಪತ್ತೆಯಾಗದ ಕೊಲೆಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಧರಣಿಯಲ್ಲಿ ಒತ್ತಾಯಿಸಲಾಗಿದೆ.