ಪುದುವೆಟ್ಟು: ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಹೊಸ ತಿರುವು ಸಿಕ್ಕಿದೆ. ಲೋನ್ ಆಪ್ ನಿಂದ ಪಡೆದುಕೊಂಡ ಹಣದಿಂದ ಕಂಪನಿಯ ಬ್ಲಾಕ್ ಮೇಲ್ ಬೆದರಿಕೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಗ್ರಾಮದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಬಾಯತ್ಯಾರು ನಿವಾಸಿ ಸ್ವರಾಜ್ (24) ಎಂಬಾತ ಆಗಸ್ಟ್ 31 ರಂದು ಬೆಳಗ್ಗೆ ಪುದುವೆಟ್ಟುವಿನಲ್ಲಿದ್ದ ಅವರ ಹಳೆಮನೆಯ ಸ್ನಾನಗೃಹದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅತ್ಯುತ್ತಮ ಕಬಡ್ಡಿ ಆಟಗಾರರಾಗಿದ್ದು. ಉಜಿರೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವರಾಜ್ ಮೊಬೈಲ್ ಫೋನ್ ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸುತ್ತಿದ್ದಾರೆ.
ಆತ ಆನ್ ಲೈನ್ ಲೋನ್ ಆಪ್ ಕಂಪನಿಯಿಂದ ಲೋನ್ ಪಡೆದಿದ್ದ ಎನ್ನಲಾಗುತ್ತಿದ್ದು, ಸ್ವರಾಜ್ ಹಂತಹಂತವಾಗಿ ಕಂಪೆನಿಗೆ ಹಣ ಕಟ್ಟಿದ್ದ, ಹೆಚ್ಚುವರಿ ಹಣ ಪಡೆಯಲು ಬೆದರಿಕೆಗಳನ್ನು ಹಾಕುತ್ತಿತ್ತು ಎನ್ನಲಾಗುತ್ತಿದ್ದು,
ಸ್ವರಾಜ್ ವಾಟ್ಸಪ್ ನಲ್ಲಿ ಅಕ್ಕನ ಮಗಳ ಡಿಪಿ ಫೋಟೋ ಹಾಕಿದ್ದನ್ನೇ ಬಂಡವಾಳ ಮಾಡಿಕೊಂಡ ಆಪ್ ಕಂಪನಿ ವಿದೇಶದ ವಾಟ್ಸಪ್ ನಂಬರಿನಿಂದ ಸ್ನೇಹಿತರಿಗೆ “ಮಗು ಮಾರಾಟಕ್ಕಿದೆ” (Baby for sale) ಎಂದು ಬರೆದು ವಿದೇಶಿ ನಂಬರ್ ಹಾಕಿ ಸ್ವರಾಜ್ ಸ್ನೇಹಿತರಿಗೆ ಕೆಲ ದಿನಗಳ ಹಿಂದೆ ಶೇರ್ ಮಾಡಿದ್ದರು ಎಂಬ ವದಂತಿ ಗ್ರಾಮದಲ್ಲಿ ಹರಡಿದೆ.
ಈ ವಿಚಾರ ಸ್ವರಾಜ್ ಗೆ ಸ್ನೇಹಿತರು ಮಾಹಿತಿ ನೀಡಿದ್ದರೆನ್ನಲಾಗುತ್ತಿದೆ. ಆಗಸ್ಟ್ 30 ಕ್ಕೆ ಸ್ವರಾಜ್ ತನ್ನ ಬ್ಯಾಂಕ್ ಖಾತೆಯಿಂದ 30,000 ಸಾವಿರ ಹಣ ಡ್ರಾ ಮಾಡಿ ಆಪ್ ಕಂಪನಿಗೆ ಕಟ್ಟಿದ್ದ. ಮತ್ತೆ ಹೆಚ್ಚುವರಿ ಹಣ ನೀಡಲು ಆಪ್ ಕಂಪನಿ ಬೆದರಿಕೆ ಹಾಕುತ್ತಿತ್ತು. ಅದಲ್ಲದೆ ಆಗಸ್ಟ್ 31 ರ ಮಧ್ಯಾಹ್ನ 2 ಗಂಟೆಗೆ ಕೊನೆಯ ಡೆಡ್ ಲೈನ್ ಎಂದು ಕಂಪನಿ ಸಂದೇಶ ಕಳುಹಿಸಿತ್ತು ಎಂಬ ವಿಷಯ ಗ್ರಾಮದಲ್ಲಿ ಚಚೆ೯ಯಾಗುತ್ತಿದೆ.
ಇದರಿಂದ ನೊಂದು ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.
ಪೊಲೀಸ್ ರ ತನಿಖೆಯ ಬಳಿಕವಷ್ಟೇ ಇದರ ಸತ್ಯಾಸತ್ಯತೆ ತಿಳಿದು ಬರಬೇಕಾಗಿದೆ.