ಬೆಳ್ತಂಗಡಿ: 40 ವರ್ಷಗಳ ಕಾಲ ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತ ಜೀವನ ನಡೆಸುತ್ತಿರುವ 93 ವರ್ಷ ಪ್ರಾಯದ ನಾರಾಯಣ ಪ್ರಭು ವಗ್ಗ ಇವರನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರ್ಪೆ ದೇವರಮನೆ ಗಣಪತಿ ನಾಯಕ್, ನಿವೃತ್ತ ಶಿಕ್ಷಕರಾದ ಕರ್ಪೆ ನಾರಾಯಣ ನಾಯಕ್, ಶಿಕ್ಷಕ ಕರ್ಪೆ ರವೀಂದ್ರ ನಾಯಕ್, ಕಾರ್ತಿಕ್ ನಾಯಕ್ , ಶ್ರೀಮತಿ ರಕ್ಷಾ, ಭಾಸ್ಕರ್ ಪ್ರಭು ಕರ್ಪೆ , ಡಾ. ರತ್ನಾಕರ್ ರಾವ್ ಬೆಳ್ತಂಗಡಿ, ಗೋಪಾಲಕೃಷ್ಣ ನಾಯಕ್, ಶ್ರೀಮತಿ ಗಾಯತ್ರಿ ನಾಯಕ್, ದಯಾನಂದ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
1947ರಲ್ಲಿ ಮೂಡಬಿದ್ರೆಯಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದಿದ್ದ ಇವರು 1949ರಲ್ಲಿ ಕುಂಬಳೆಯ ಮಾಗ್ರಾಲ್ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡಿದ್ದರು. ಬಳಿಕ ಕಾಡಬೆಟ್ಟು, ಶಾಂತಿಗೋಡು, ನರಿಮೊಗರು ಶಾಲೆಯಲ್ಲಿ ಸೇವೆ ಸಲ್ಲಿಸಿ 1989ರಲ್ಲಿ ಸೇವಾ ನಿವೃತ್ತಿ ಹೊಂದಿದ್ದರು. ಕಾಡಬೆಟ್ಟು ಶಾಲೆಯಲ್ಲಿ ಅಧ್ಯಾಪಕರಾಗಿದ್ದಾಗ ಶ್ರೀ ಶಾರದಾ ಪೂಜೆಯನ್ನು ಪ್ರಾರಂಭಿಸಿ, ಶ್ರೀ ಶಾರದಾ ಮಂದಿರವನ್ನು ಸ್ಥಾಪಿಸಿದ್ದರು. ಕಾವಳಪಡೂರು ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿ ಅದರ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ, ನರಿಮೊಗರಿನಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಮಂದಿರ ಸ್ಥಾಪನೆ, ಪುತ್ತೂರಿನಲ್ಲಿ ಅಧ್ಯಾಪಕರ ಸಹಕಾರ ಸಂಘದ ಸ್ವಂತ ಕಟ್ಟಡ ಸ್ಥಾಪನೆಗೆ ಶ್ರಮಿಸಿದ್ದರು.
ಸಾವಿರಾರು ಮಕ್ಕಳಿಗೆ ಉಚಿತ ಜಾತಕಗಳನ್ನು ಬರೆದುಕೊಟ್ಟಿರುವ ಇವರು, ಬಾವಿ ಮತ್ತು ಕೊಳವೆ ಬಾವಿಗೆ ಉಚಿತವಾಗಿ ನೀರು ಶೋಧಿಸುವ ಕಾರ್ಯ ಮಾಡುತ್ತಿದ್ದರು. ಜಿಲ್ಲಾ ಕುಡಾಲ್ ದೇಶಸ್ಥ ಆದ್ಯ ಗೌಡ್ ಬ್ರಹ್ಮಾಣದ ಸ್ಥಾಪಕ ಸದಸ್ಯರಾಗಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಸ್ಥಾಪಕ ಸದಸ್ಯರಾಗಿ ಸೇವೆಸಲ್ಲಿಸಿದ್ದು, ಪ್ರಸ್ತುತ ಮಗಳು ಶಾರದಾ ಹಾಗೂ ಅಳಿಯ ದಯಾನಂದ ನಾಯಕ್‌ರೊಂದಿಗೆ ಬೆಳ್ತಂಗಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.