ಬೆಳಾಲು: ಸಹಕಾರಿ ಸಂಸ್ಥೆ ಲಾಭದ ದೃಷ್ಟಿಯಿಂದ ನಡೆಸದೆ ಸೇವೆಯ ಉದ್ದೇಶದಿಂದ ಕೆಲಸಮಾಡಿದ್ದರ ಫಲವಾಗಿ ಜಿಲ್ಲೆಯ ಮಟ್ಟಿಗೆ 170 ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ಎಲ್ಲವೂ ಸ್ವಂತ ಕಟ್ಟಡ ಹಾಗೂ ಕೋಟಿಗೂ ಅಧಿಕ ಲಾಭದಲ್ಲಿದೆ. ಅವಿಭಜಿತ ಜಿಲ್ಲೆಯಲ್ಲಿ ಆರ್ಥಿಕವಾಗಿ ಯಾವೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳದ ಜಿಲ್ಲೆಯಾಗಿದೆ. ಜತೆಗೆ 28 ವರ್ಷದಿಂದ ರೈತರು ಮರುಪಾವತಿ ಮಾಡಿದ ಜಿಲ್ಲೆಯಿದ್ದರೆ ನಮ್ಮ ಜಿಲ್ಲೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಮತ್ತು ರಾಜ್ಯ ಸಹಕಾರಿ ಮಾರಾಟ ಮಹಾಮಂಡಲ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ನೂತನ ಗೋದಾಮು ಕಟ್ಟಡವನ್ನು ಸೆ.10 ರಂದು ಉದ್ಘಾಟಿಸಿ ಬಳಿಕ ಬೆಳಾಲು ಶ್ರೀ ಧ.ಮಂ.ಪ್ರೌಢ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮದ ಅಭಿವೃದ್ಧಿಗೆ ಮಹಿಳಾ ಸದಸ್ಯರ ಸಹಕಾರ ಅತ್ಯಗತ್ಯ. ಈ ನೆಲೆಯಲ್ಲಿ ಅವರಿಗೂ ಸ್ವಾವಲಂಬಿ ಜೀವನವನ್ನು ಸಹಕಾರಿ ಸಂಸ್ಥೆ ಕಲ್ಪಿಸಿದೆ. ನವೋದಯ ಸ್ವಸಹಾಯ ಸಂಘ ಜಾತಿ ಭೇದ, ಭಾವ ಮರೆತು ಸಮಾಜದಲ್ಲಿ ಸದೃಢವಾಗಿದೆ. ಬೆಳಾಲು ಸಂಘದ ಗೋದಾಮು ಕಟ್ಟಡಕ್ಕೆ ಜಿಲ್ಲಾ ಸಹಕಾರಿ ಸಂಘದಿಂದ 10 ಲಕ್ಷ ರೂ. ನೆರವು ನೀಡುವುದಾಗಿ ಘೋಷಿಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಸಹಕಾರಿ ಸಂಸ್ಥೆ ಸದೃಢವಾಗಿ ಬೆಳೆಯುವಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಆಧುನಿಕ ಮಳವಳ್ಳಿ ಶಿವರಾಯರಾಗಿದ್ದಾರೆ. ಬೆಳಾಲು ಕೃಷಿಕರಿಗೆ ಶಕ್ತಿ ತುಂಬುವ ನೆಲೆಯಲ್ಲಿ ಗೋದಾಮು ಕಟ್ಟಡ ಲೋಕಾರ್ಪಣೆಯಾಗಿದೆ. ಬೆಳಾಲು ಅಭಿವೃದ್ಧಿ ಪಥದಲ್ಲಿ ಸಾಗಿಸಲು ಸರಕಾರದ ಹಲವು ಯೋಜನೆಗಳನ್ನು ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಬೆಳಾಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಚ್.ಪದ್ಮಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಮೂರನೇ ಕಟ್ಟಡ ಇಂದು ಉದ್ಘಾಟನೆಗೊಂಡಿದೆ. ಸಹಕಾರಿ ಸಂಘದ ಅಭಿವೃದ್ಧಿಯಲ್ಲಿ ದೊಡ್ಡ ಪಾಲು ರಾಜೇಂದ್ರ ಕುಮಾರ್ ಅವರಿಗಿದೆ. 27 ಕೋಟಿ ಸಾಲ ನೀಡಿದ್ದೇವೆ. 10 ಕೋಟಿ ಸ್ವಂತ ಬಂಡವಾಳದಿಂದ ಸಾಲ ನೀಡುವ ಮಟ್ಟಿಗೆ ಬೆಳೆದಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸಮ್ಮಾನಿಸಲಾಯಿತು. ಬಳಿಕ ನೂತನ 5 ನವೋದಯ ಸ್ವಸಹಾಯ ಸಂಘ ಉದ್ಘಾಟಿಸಲಾಯಿತು. ಸಂಘದ ರೈತರ ಕ್ಷೇಮನಿಧಿಯಿಂದ ಪರಿಹಾರ ವಿತರಣೆ ಮಾಡಲಾಯಿತು. 2023-24 ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬೆಳಾಲು ಶ್ರೀ ಧ.ಮಂ.ಪ್ರೌಢ ಶಾಲೆ ಮುಖ್ಯಶಿಕ್ಷಕ ರಾಮಕೃಷ್ಣ ಭಟ್ ಅವರನ್ನು ಸಮ್ಮಾನಿಸಲಾಯಿತು. ಗೋದಾಮು ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡ ಪ್ರಮುಖರಿಗೆ ಮತ್ತು ದಾನಿಗಳಿಗೆ ಗೌರವಿಸಲಾಯಿತು.
ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಅಧ್ಯಕ್ಷ ಶ್ರೀಧರ ಜಿ.ಭಿಡೆ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂತು ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್, ಸಹಕಾರಿ ಸಂಘದ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ಎ., ಬೆಳಾಲು ಪ್ರಾ.ಕೃ.ಪ.ಸ.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ನಾರಾಯಣ ಗೌಡ ಉಪಸ್ಥಿತರಿದ್ದರು.
ಬೆಳಾಲು ಶ್ರೀ ಧ.ಮಂ.ಪ್ರೌಢ ಶಾಲೆ ಮುಖ್ಯಶಿಕ್ಷಕ ರಾಮಕೃಷ್ಣ ಭಟ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಸುರೇಂದ್ರ ಗೌಡ ವಂದಿಸಿದರು. ಉಪನ್ಯಾಸಕಿ ಮೀನಾಕ್ಷಿ ನಿರೂಪಿಸಿದರು. ಶಿಕ್ಷಕ ಮಹೇಶ್ ಸಮ್ಮಾನ ಪತ್ರ ವಾಚಿಸಿದರು,.