ಮಿತ್ತಬಾಗಿಲು: ಸುಮಾರು 240ಕ್ಕೂ ಹೆಚ್ಚು ಭತ್ತದ ವಿವಿಧ ತಳಿಗಳನ್ನು, ಹಲವಾರು ಕೃಷಿ ಸಂಬಂಧಿತ ಸಸ್ಯ ತಳಿಗಳನ್ನು ಸಂಗ್ರಹಿಸಿ, ಬೆಳೆಸಿ, ಸಂರಕ್ಷಿಸಿಕೊಂಡು ಬರುತ್ತಿರುವ ಮಿತ್ತಬಾಗಿಲು ಗ್ರಾಮದ ರೈತ ಅಮೈ ಬಿ.ಕೆ. ದೇವರಾವ್ ಅವರಿಗೆ 2020-21ನೇ ಸಾಲಿನ `ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ’ ಯನ್ನು ಸೆ.12ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು.
ದೇಶದ 10, ರಾಜ್ಯದ ಇಬ್ಬರು ಈ ಪ್ರಶಸ್ತಿಗೆ ಪಾತ್ರರಾಗಿದ್ದು, ರೂ.1.50 ಲಕ್ಷ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಹೊಂದಿದೆ.
ಬಿ.ಕೆ ದೇವರಾವ್ ಅವರಲ್ಲಿ ದೇಶದ ಹಲವಾರು ಜಾತಿಯ ಭತ್ತದ ತಳಿಗಳ ಸಂಗ್ರಹವಿದೆ. ಜೊತೆಗೆ ಇದನ್ನು ತಮ್ಮ ಜಾಗದಲ್ಲಿ ಬೆಳೆಸುತ್ತಿದ್ದಾರೆ. ಕರ್ನಾಟಕದ 117, ಕೇರಳದ 25, ತಮಿಳುನಾಡಿನ 10, ಪಶ್ಚಿಮ ಬಂಗಾಳದ 5 ಮಹಾರಾಷ್ಟ್ರದ 2, ಆಂಧ್ರಪ್ರದೇಶ 2, ಯು. ಪಿ, ಗುಜರಾತ್‌ನ ತಲಾ ಒಂದು ತಳಿಗಳನ್ನು ಒಳಗೊಂಡಿರುವ 240 ಭತ್ತದ ತಳಿಗಳನ್ನು ಸಂರಕ್ಷಿಸುವುದು ಅವರ ಸಾಧನೆಗಳಲ್ಲಿ ಸೇರಿದೆ. ಅದಲ್ಲದೆ ಛತ್ತಿಸ್‌ಗಡ, ಮಣಿಪುರ, ದೆಹಲಿ, ಜಾರ್ಖಂಡ್, ಅಸ್ಸಾಂ,ಮಧ್ಯಪ್ರದೇಶ ಮೊದಲಾದ ರಾಜ್ಯಗಳ ಹಲವಾರು ಭತ್ತದ ತಳಿಗಳು ಇವರ ಸಂಗ್ರಹದಲ್ಲಿದೆ. ಭತ್ತದ ಹೊರತಾಗಿ 5-6 ಅಡಿಕೆ ತಳಿಗಳು, 50 ಹಲಸು, ಕರಿಮೆಣಸಿನ 4, ಗೆಣಸಿನ 25, 6 ಮರಗೆಣಸು ಪ್ರಭೇದಗಳು ಮತ್ತು ಸುಮಾರು100 ಕ್ಕೂ ಮಿಕ್ಕಿ ಔಷಧೀಯ ಸಸ್ಯಗಳು ಇವರ ತೋಟದಲ್ಲಿದೆ.
ಇವರು ರಾಸಾಯನಿಕ, ಕೀಟನಾಶಕಗಳನ್ನು ಬಳಸದೆ ಬೇಸಾಯ ಮಾಡುತ್ತಾ ಬಂದಿದ್ದಾರೆ. ಇವರ ಪುತ್ರ ಬಿ.ಕೆ. ಪರಮೇಶ್ವರ್ ರಾವ್ ಅವರು ತಂದೆಯ ಸಾಧನೆಗೆ ಬೆನ್ನೆಲುಬಾಗಿದ್ದು, ಬೀಜ ಬ್ಯಾಂಕ್ ಸ್ಥಾಪಿಸಿ, ಬೇಡಿಕೆ ಇಡುವ ರೈತರಿಗೆ ತಮ್ಮ ತಂದೆಯ ಸಂಗ್ರಹದಲ್ಲಿರುವ ಭತ್ತದ ತಳಿಯ ಒಂದು ಮುಷ್ಟಿ ಭತ್ತ ನೀಡುವ ಯೋಜನೆ ಕೈಗೊಂಡಿದ್ದಾರೆ. ಒಂದು ಮುಷ್ಟಿ ಭತ್ತ ಒಯ್ಯುವ ರೈತ ಇದರ ಬೆಳೆ ಬೆಳೆದ ಬಳಿಕ ಎರಡು ಮುಷ್ಟಿ ಭತ್ತವನ್ನು ಇವರಿಗೆ ನೀಡಬೇಕು. ಇದರಿಂದ ಭತ್ತದ ತಳಿಗಳು ಹೆಚ್ಚು ಕಡೆ ಬೆಳೆಯಲು ಹಾಗೂ ಬೇಡಿಕೆ ಸಲ್ಲಿಸುವವರಿಗೆಲ್ಲ ನೀಡಲು ಸಹಕಾರಿಯಾಗುತ್ತದೆ. ಇವರ ಈ ವಿಶಿಷ್ಟ ಸಾಧನೆಯನ್ನು ಗುರುತಿಸಿ 2017ರಲ್ಲಿ ರಾಷ್ಟ್ರ ಪತಿ ಭವನದಲ್ಲಿ ಸೃಷ್ಟಿ ಸಮ್ಮಾನ್, 2018ರಲ್ಲಿ ವಿಕ ಸೂಪರ್ ಸ್ಟಾರ್ ರೈತ, 2019ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೇರಳದಲ್ಲಿ ವೀಕ್ ಆಫ್ ದಿ ರೈಸ್ ಆಕ್ಷನ್ ಸೇರಿದಂತೆ ಹಲವು ಪ್ರಶಸ್ತಿಗಳು ಸಿಕ್ಕಿವೆ. 50ಕ್ಕೂ ಮಿಕ್ಕಿದ ಸಂಘ ಸಂಸ್ಥೆಗಳು ಇವರ ವಿಶಿಷ್ಟ ಸಾಧನೆಯನ್ನು ಗುರುತಿಸಿ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ.