ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಉಜಿರೆ ಶ್ರೀ ಧ ಮ ಪಾಲಿಟೆಕ್ನಿಕ್ ಕಾಲೇಜಿನವರಿಂದ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವು ಮುಂದಿನ ಅಕ್ಟೋಬರ್ ತಿಂಗಳ 15 ರಿಂದ 21ರ ತನಕ ಜರಗಲಿದೆ. ಈ ಸಂಬಂಧವಾಗಿ ಶಾಲೆಯಲ್ಲಿ ಪೂರ್ವ ತಯಾರಿ ಸಭೆಯು ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ ಬೆಳಾಲು ಗ್ರಾಮ ಪಂಚಾಯತ್ತಿನ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡರವರು ಆಗಮಿಸಿದ್ದು, ಬೆಳಾಲು ಗ್ರಾಮಸ್ಥರಿಗೆ ಒದಗಿ ಬಂದ ವಿಶೇಷ ಸಂದರ್ಭ. ರಾಷ್ಟ್ರೀಯ ಸೇವಾ ಯೋಜನೆಯವರ ಮೂಲಕ ಊರಿನ ಅಭಿವೃದ್ಧಿಗಾಗಿ ತೊಡಗಿಕೊಳ್ಳಲಿರುವ ಅವಕಾಶ ಇದು. ವಿವಿಧ ಜನೋಪಯೋಗೀ ಕಾರ್ಯಕ್ರಮಗಳ ಮೂಲಕ ಶಿಬಿರವನ್ನು ಸ್ಮರಣೀಯಗೊಳಿಸೋಣ ಎಂದು ಪಂಚಾಯತ್ತಿನ ಅಧ್ಯಕ್ಷರು ಅಭಿಪ್ರಾಯ ಪಟ್ಟರು.
ಕಾಲೇಜಿನ ಉಪನ್ಯಾಸಕರಾದ ಅವಿನಾಶ್ ಭಟ್ ರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ, ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಸೊಸೈಟಿ ಹಾಗೂ ಬೆಳಾಲು ಗ್ರಾಮ ಪಂಚಾಯತ್ತಿನ ಸಹಕಾರದೊಂದಿಗೆ ಉಚಿತ ವೈದ್ಯಕೀಯ ಶಿಬಿರ, ಕೃಷಿ ಕ್ಷೇತ್ರ ಭೇಟಿ, ಕಾಷ್ಠ ಶಿಲ್ಪಕಲೆ ಪ್ರಾತ್ಯಕ್ಷಿಕೆ, ಸ್ವಚ್ಚತಾ ಜಾಗೃತಿ ಆಂದೋಲನ, ವಿದ್ಯಾರ್ಥಿಗಳಿಗೆ ಮಾಹಿತಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಅಭಿಪ್ರಾಯ ಪಡೆಯಲಾಯಿತು.
ಸಭೆಯಲ್ಲಿ ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷರಾದ ಶೇಖರ ಗೌಡ ಕೊಲ್ಲಿಮಾರು, ನಾಗಾಂಬಿಕಾ ಸಂಜೀವಿನಿ ಸಂಘಗಳ ಅಧ್ಯಕ್ಷೆ ಶ್ರೀಮತಿ ಮಧುರ ಸೌತೆಗದ್ದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸಂಜೀವ ಗೌಡ ಮಂಡಾಲು, ಸೇವಾ ಪ್ರತಿನಿಧಿಗಳಾದ ಶ್ರೀಮತಿ ಆಶಾ, ಶ್ರೀಮತಿ ಪ್ರಭಾವತಿ, ಹಳೆ ವಿದ್ಯಾರ್ಥಿ ಸಂಘದ ಮಹಮದ್ ಶರೀಫ್ ಬೆಳಾಲು, ಉಮೇಶ್ ಮಂಜೊತ್ತು, ಮಾಯ ಭಜನಾ ಮಂಡಳಿಯ ಅಧ್ಯಕ್ಷರಾದ ಕೃಷ್ಣಪ್ಪ ಗೌಡ ಬೆರ್ಕೆಜಾಲು, ಶಶಿಧರ್ ಶಿಲ್ಪಿ ಮಾಯ, ಶಿಕ್ಷಕರಾದ ಶ್ರೀಮತಿ ರಾಜಶ್ರೀ, ಕೃಷ್ಣಾನಂದ, ಜಗದೀಶ್ ಎನ್, ಗಣೇಶ್ವರ್ ಎಂ , ಸುಮನ್ ಯು ಎಸ್, ಕು. ಕೋಕಿಲಾ, ಎನ್ ಎಸ್ ಎಸ್ ಉಪಯೋಜನಾಧಿಕಾರಿ ಲೋಹಿತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಯೋಜನಾಧಿಕಾರಿ ಪ್ರಕಾಶ್ ಗೌಡರವರು ವಂದಿಸಿದರು.