ಬೆಳ್ತಂಗಡಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಪಿ ಜಿ ಆರ್ ಸಿಂಧ್ಯಾ ರವರು ಸೌಹಾರ್ದ ಭೇಟಿ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಅವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಎಸ್ ಡಿ ಎಂ ಬೆಳ್ತಂಗಡಿಯ ಕಬ್ಸ್ ಬುಲ್ ಬುಲ್ಸ್ , ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮಾನ್ಯರ ಹುಟ್ಟು ಹಬ್ಬದ ಶುಭ ಹಾರೈಕೆಯ ಹಾಡಿನೊಂದಿಗೆ ರಾಜ್ಯ ಮುಖ್ಯ ಆಯುಕ್ತರನ್ನು ಬರಮಾಡಿಕೊಂಡರು ಹಾಗೂ ಮಕ್ಕಳೇ ತಯಾರಿಸಿದ ಹೂವಿನ ಬೊಕ್ಕೆ ಹಾಗೂ ಗ್ರೀಟಿಂಗ್ ಕಾಡ್೯ನ್ನು ಪಿಜಿಆರ್ ಸಿಂಧ್ಯಾ ರಿಗೆ ನೀಡಿದರು.
ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಪರವಾಗಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತರಾದ (ADC) ಬಿ ಸೋಮಶೇಖರ ಶೆಟ್ಟಿ ಪ್ರಾಸ್ತಾವಿಕ ನುಡಿಯೊಂದಿಗೆ ಮಾನ್ಯರನ್ನು ಗೌರವಿಸಿ ಅಭಿನಂದಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಪದ್ಮಕುಮಾರ್ ಸ್ಥಳೀಯ ಸಂಸ್ಥೆಯ ಪರವಾಗಿ ಅಭಿನಂದಿಸಿ ಗೌರವಿಸಿದರು.
ಸನ್ಮಾನಿಸಲ್ಪಟ್ಟ ಪಿ ಜಿ ಆರ್ ಸಿಂಧ್ಯ ರವರು ಸ್ಕೌಟ್ಸ್ ಮತ್ತು ಗೈಡ್ಸ್ ಜೀವನದಲ್ಲಿ ಯಾವ ರೀತಿ ನಾವು ನಾಯಕತ್ವವನ್ನು ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ಯಾವ ರೀತಿ ರೂಪಿಸಬೇಕು ಎಂಬುದರ ರೂಪುರೇಷೆಯನ್ನು ನೀಡಿದರು. ಖಾವಂದರ ಒಡನಾಟ, ಮಧ್ಯ ವರ್ಜನ ಶಿಬಿರವು ಖಾವಂದರ ನೇತೃತ್ವದಲ್ಲಿ ನಡೆಯುತ್ತಿರುವುದರ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಬಗ್ಗೆ ಅಪಾರ ಗೌರವ ಹೊಂದಿರುವ ಪಿ ಜಿ ಆರ್ ಸಿಂಧ್ಯಾ ರವರು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ರವರು ಬೆಳ್ತಂಗಡಿಯಲ್ಲಿ ಸ್ಕೌಟ್ ಗೈಡ್ ಭವನ ನಿರ್ಮಾಣಕ್ಕಾಗಿ ಶ್ರಮಪಡುತ್ತಿರುವುದನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಆಯುಕ್ತರಾದ ಪ್ರಭಾಕರ ಭಟ್ ರವರು ಉಪಸ್ಥಿತರಿದ್ದರು. ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳಾದ ಸುದ್ದಿ ಉದಯ ಪತ್ರಿಕೆಯ ತುಕಾರಾಂ ಇವರು ಪಿಜಿಆರ್ ಸಿಂದ್ಯಾರವರಿಗೆ ಸುದ್ದಿ ಉದಯ ಪತ್ರಿಕೆಯನ್ನು ನೀಡಿ, ಸುದ್ದಿ ಉದಯ ಪತ್ರಿಕೆಯ ಬಗ್ಗೆ ತಿಳಿಯಪಡಿಸಿದರು.
ಧನ್ಯವಾದವನ್ನು ಅಧ್ಯಕ್ಷರಾದ ಪದ್ಮ ಕುಮಾರ್ ನೆರವೇರಿಸಿಕೊಟ್ಟರು. ನಿರೂಪಣೆ ಹಾಗೂ ಸ್ವಾಗತವನ್ನು ಸ್ಥಳೀಯ ಸಂಸ್ಥೆ ಕಾರ್ಯದರ್ಶಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಯೋಜಕ ಶಿಕ್ಷಕಿ ಶ್ರೀಮತಿ ಪ್ರಮೀಳ ನೆರವೇರಿಸಿ ಕಾರ್ಯಕ್ರಮವನ್ನು ಸಂಘಟಿಸಿದರು. ಮಕ್ಕಳ ಪೋಷಕರು, ಕಬ್ಸ್ ಬುಲ್ ಬುಲ್ಸ್ ಸ್ಕೌಟ್ ಗೈಡ್ ವಿದ್ಯಾರ್ಥಿಗಳು, ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.