ಬೆಳ್ತಂಗಡಿ: ಮೂಡಬಿದ್ರೆ ಸಮೀಪದ ಹೆಜಮಾಡಿಕೋಡಿ ಬಂದರು ಪ್ರದೇಶದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣದ ಶೀಟು ಮತ್ತು ರಾಡ್ ಗಳನ್ನು ಕಳವುಗೈದ ಬೆಳ್ತಂಗಡಿ ತಾಲೂಕಿನ ಐವರು ಆರೋಪಿಗಳನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತ ಆರೋಪಿಗಳಿಂದ ರೂ. 21 ಲಕ್ಷ ಮೊತ್ತದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಹಳೆಪೇಟೆ ಕುಂಠಿನಿ, ಮದ್ದಡ್ಕ, ಗುರುವಾಯನಕರೆ ಪ್ರದೇಶದ ನಿವಾಸಿಗಳಾದ ಮೊಹಮ್ಮದ್ ಹಸೀಬ್, ನಿಜಾಮುದ್ದೀನ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಆಶಿರ್ ಕೆ. ಮತ್ತು ಕಬ್ಬಿದ ಸೊತ್ತುಗಳನ್ನು ಖರೀದಿಸಿದ ಹಂಝಾ ಬೆಳ್ತಂಗಡಿ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ ಕಳವು ಗೈದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಆ. 24ರಿಂದ ಸೆ.25ರ ಅವಧಿಯಲ್ಲಿ ಹೆಜಮಾಡಿ ಕೋಡಿ ಬಂದರು ಪ್ರದೇಶದಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು ರೂ. 18,00,078 ಮೌಲ್ಯದ ಕಬ್ಬಿಣದ ಶೀಟುಗಳನ್ನು ಮತ್ತು ರಾಡ್‌ಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ದ ಅ. 3ರಂದು ಪಡುಬಿದ್ರೆ ಪೊಲೀಸ್ ಠಾಣೆಗೆ ಕಂಪೆನಿಯವರು ದೂರು ನೀಡಿದ್ದು, ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾಪು ವೃತ್ತ ನಿರೀಕ್ಷಕಿ ಜಯಶ್ರೀಮಾನೆ, ಪಡುಬಿದ್ರಿ ಎಸ್.ಐ ಪ್ರಸನ್ನ ಎಂ.ಎಸ್., ಕೈಂ ಎಸ್ಸೈ ಸುದರ್ಶನ್ ದೊಡ್ಡಮನಿ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಿದ ಪಡುಬಿದ್ರಿ ಪೊಲೀಸರು ಅ. ೬ರಂದು ಬೆಳ್ತಂಗಡಿ ತಾಲೂಕಿನ ಮದ್ದಡ್ಕ, ಹಳೆಪೇಟೆ ಕುಂಠಿನಿ ಬಳಿ ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ನಡೆಸಿದ ಮೂಡಬಿದ್ರೆ ಪೊಲೀಸರು ತನಿಖೆ ನಡೆಸಿ ಬಂಧಿತರನ್ನು ನ್ಯಾಯಾಲಯ ಹಾಜರುಪಡಿಸಲಾಗಿದ್ದು, ಹದಿನೈದ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಳವಾದ ಸೊತ್ತುಗಳ ವಶ:
ಆರೋಪಿಗಳಿಂದ 5,76,653 ರೂ. ಮೌಲ್ಯದ 86 ಕಬ್ಬಿಣದ ಎಂ. ಎಸ್. ಶೀಟುಗಳು, 61,382 ರೂ. ಮೌಲ್ಯದ ಕಬ್ಬಿಣದ ರಾಡ್‌ಗಳು, 3 ಲಕ್ಷರೂ. ಮೌಲ್ಯದ ಟಾಟಾ ಏಸ್ ವಾಹನ, 5 ಲಕ್ಷರೂ. ಮೌಲ್ಯದ ಪಿಕ್‌ಅಪ್ ವಾಹನ, 7 ಲಕ್ಷರೂ. ಮೌಲ್ಯದ ಇನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶೇ. 70ರಷ್ಟು ಕದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದ ಸೊತ್ತುಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.