ಧರ್ಮಸ್ಥಳ: ಧರ್ಮದ ಮರ್ಮವನ್ನರಿತು ನಿತ್ಯವೂ ಅನುಷ್ಠಾನಗೊಳಿಸಬೇಕು. ಧರ್ಮವು ಉಸಿರಾಟದಂತೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಭಾರತೀಯ ಜೈನ್‌ಮಿಲನ್‌ನ ಕೆನಡಾ ಘಟಕವನ್ನು ವೆಬಿನಾರ್ ಮೂಲಕ ಉದ್ಘಾಟಿಸಿ ಶುಭ ಹಾರೈಸಿದ ಅವರು ಸತ್ಯ, ಅಹಿಂಸೆ, ಅಪರಿಗ್ರಹ, ಸ್ಯಾದ್ವಾದ ಮೊದಲಾದ ತತ್ವಗಳು ಹಾಗೂ ಆಚಾರ-ವಿಚಾರಗಳ ಅನುಷ್ಠಾನದಿಂದ, ಜೈನರು ಅಲ್ಪಸಂಖ್ಯಾತರಾದರೂ, ಸಮಾಜದಲ್ಲಿ ಅವರಿಗೆ ವಿಶೇಷ ಸ್ಥಾನಮಾನ, ಗೌರವವಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು. ಜೈನ್‌ಮಿಲನ್ ಮೂಲಕ ಪರಸ್ಪರ ಪ್ರೀತಿ-ವಿಶ್ವಾಸ, ಗೌರವ, ಆತ್ಮೀಯತೆ ಹೆಚ್ಚಾಗಿ ಸಮಾಜದ ಸಂಘಟನೆ ಮತ್ತು ಬಲವರ್ಧನೆಯಾಗಬೇಕು. ತನ್ಮೂಲಕ ಸಮಾಜ ಸೇವೆ ಹಾಗೂ ಸತ್ಕಾರ್ಯಗಳನ್ನು ಮಾಡಲು ಅನುಕೂಲವಾಗುತ್ತದೆ.
ಕೆನಡಾ ವಿಶ್ವದ ದೊಡ್ಡ ದೇಶವಾದರೂ ಶಾಂತಿಪ್ರಿಯ ದೇಶವಾಗಿದೆ. ಅಲ್ಲಿನ ಜನರ ಸೌಮ್ಯ ಸ್ವಭಾವ, ತಾಳ್ಮೆ, ಸೇವಾಕಳಕಳಿಯನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು.
ಭಾರತೀಯ ಜೈನ್‌ಮಿಲನ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ನೇತೃತ್ವದಲ್ಲಿ ಜೈನ್‌ಮಿಲನ್ ಶಾಖೆಗಳು ಅಮೇರಿಕಾ, ಲಂಡನ್, ಆಸ್ಟ್ರೇಲಿಯಾ ಮೊದಲಾದ ಹಲವು ದೇಶಗಳಲ್ಲಿ ಪ್ರಾರಂಭವಾಗಿದ್ದು ವಿಶ್ವ ಜೈನ್‌ಮಿಲನ್ ದೇಶ-ವಿದೇಶಗಳಲ್ಲಿ ಮಧುರ ಬಾಂಧವ್ಯ ಬೆಳೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆನಡಾ ಜೈನ್‌ಮಿಲನ್ ಶಾಖೆಯ ಅಧ್ಯಕ್ಷರಾದ ವೀರ್ ರಾಜಗೌಡ ಪಾಟೀಲ್ ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಹೆಗ್ಗಡೆಯವರು ಶುಭ ಹಾರೈಸಿದರು.
ಮೂಡಬಿದ್ರೆ ಜೈನ ಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು.
ಕೆನಡಾದ ಲೋಕಸಭಾ ಸದಸ್ಯ ಚಂದ್ರಾ ಆರ್ಯ ಮತ್ತು ಸಂಗೀತ ಆರ್ಯ, ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಶುಭಾಶಂಸನೆ ಮಾಡಿದರು.