ಬೆಳ್ತಂಗಡಿ: ಶಿಬಾಜೆಯಲ್ಲಿ ನಡೆದ ದಲಿತ ಯುವಕ ಶ್ರೀಧರನ ಹತ್ಯೆ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ದಲಿತ ಸಂಘಟನೆಗಳ ನಿರಂತರ ಹೋರಾಟ ನಡೆಸಿದ ಪರಿಣಾಮ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸದ್ರಿ ಪ್ರಕರಣವನ್ನು ಸಿ.ಒ.ಡಿ ತನಿಖೆಗೆ ಆದೇಶಿಸಿರುತ್ತಾರೆ ಎಂದು ಶಿಬಾಜೆಯಲ್ಲಿ ನಡೆದ ದಲಿತ ಯುವಕ ಶ್ರೀಧರನ ಹತ್ಯೆ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ದಲಿತ ಸಂಘಟನೆಗಳ ನಿರಂತರ ಹೋರಾಟ ನಡೆಸಿದ ಪರಿಣಾಮ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸದ್ರಿ ಪ್ರಕರಣವನ್ನು ಸಿ.ಐ.ಡಿ ತನಿಖೆಗೆ ಆದೇಶಿಸಿರುತ್ತಾರೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಹೇಳಿದರು.
ಅವರು ಅ.29 ರಂದು ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಪ್ರಕರಣದಲ್ಲಿ ತನಿಖಾಧಿಕಾರಿಗಳಾಗಿದ್ದ ಪ್ರತಾಪ್‌ಸಿಂಗ್ ತೋರಟ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಗನಾ ಪಿ ಕುಮಾರ್‌ಯವರು ಸಮರ್ಪಕವಾಗಿ ತನಿಖೆ ನಡೆಸಿಲ್ಲ, ಇವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದಲಿತ ಸಮುದಾಯದ ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟು ದಲಿತ ಸಂಘಟನೆಯ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಹತ್ಯೆಯಾದ ಶ್ರೀಧರನ ಕುಟುಂಬದ ಜೊತೆ ನಿಂತು ನ್ಯಾಯಕ್ಕಾಗಿ ಶ್ರಮಿಸಿ ಪ್ರಕರಣವನ್ನು ಸರಕಾರದ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸಹಕರಿಸಿರುವ ಮಾಜಿ ಸಚೇತಕರಾದ ವಸಂತ ಬಂಗೇರ, ಮಾಜಿ ಸಚಿವರಾದ ಗಂಗಾಧರ ಗೌಡ ಹಾಗೂ ಮಾಜಿ ರಾಜ್ಯ ಸಭಾ ಸದಸ್ಯರಾದ ಬಿ. ಇಬ್ರಾಹಿಂ ಇವರಿಗೆ ದ.ಸಂ.ಸ ಅಂಬೇಡ್ಕರ್‌ವಾದ ಬೆಳ್ತಂಗಡಿ ತಾಲೂಕು ಸಮಿತಿ ಹಾಗೂ ದ.ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯು ಅಭಿನಂದನೆಯನ್ನು ಸಲ್ಲಿಸುತ್ತದೆ ಎಂದು ತಿಳಿಸಿದರು.
2022 ಡಿ.17 ರಂದು ಶಿಬಾಜೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಶ್ರೀಧರ ಎಂಬ ಯುವಕನ ಹತ್ಯೆ ನಡೆದಿದ್ದು, ಪ್ರಕರಣದಲ್ಲಿ ಇದೇ ಗ್ರಾಮದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ.ಎಲ್ ಆನಂದ ಗೌಡ, ಮಹೇಶ್ ಪೂಜಾರಿ ಎಂಬುವವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಲತ ದೌರ್ಜನ್ಯ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಾಗಿತ್ತು. ಆಗ ಡಿ.ವೈ.ಎಸ್.ಪಿ ಪ್ರತಾಪ್ ಸಿಂಗ್ ತೋರಟ್‌ರವರು ತನಿಖೆ ಕೈಗೆತ್ತಿಗೊಂಡಿದ್ದರು. ಆರೋಪಿಗಳು ಕೊಕ್ಕಡದ ಬಾರ್‌ವೊಂದರಲ್ಲಿ ಪಾರ್ಟಿ ಮಾಡಿದ ಪೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರೂ, ಆರೋಪಿಗಳನ್ನು ಆಗ ಬಂಧಿಸಲಿಲ್ಲ ನಂತರ ಡಿಎಸ್‌ಎಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಎಲ್ಲರನ್ನು ಬಂಧಿಸಲಾಯಿತು ಎಂದು ತಿಳಿಸಿದರು.
ಮೃತ ಶರೀರದ ಮರಣೋತ್ತರ ವರದಿಯಲ್ಲಿ ದೇಹದ ಮೇಲೆ 13 ಗಾಯಗಳಿದ್ದು, ತಲೆಗೆ ಆಗಿರುವ ಆಳವಾದ ಗಾಯದಿಂದಾಗಿ ಸತ್ತಿದ್ದಾನೆ ಎಂದು ಬರೆದಿದ್ದಾರೆ. ಹೊಟ್ಟೆಯಲ್ಲ ವಿಷದ ಅಂಶ ಸ್ವಲ್ಪ ಇದ್ದು ರಕ್ತಕ್ಕೆ, ಹೊಟ್ಟೆಗೆ ಅವರ್‌ಗೆ, ದೇಹಕ್ಕೆ ಪಸರಿಸಿರುವುದಿಲ್ಲ. ವಿಷದಿಂದ ಆತ ಸತ್ತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ ಮರಣೋತ್ತರ ವರದಿಯಲ್ಲಿನ ಅಂಶವನ್ನು ಮರೆಮಾಚಿ, ಆತ ವಿಷ ಕುಡಿದು ಸತ್ತಿದ್ದಾನೆ ಎಂದು ನ್ಯಾಯಾಲಯಕ್ಕೆ ವರದಿ ನೀಡಲಾಗಿತ್ತು. ಈ ಬಗ್ಗೆ ನ್ಯಾಯಾಲಯವು ದಿನಾಂಕ ೦೭-೦೨-೨೦೨೩ ಫೆ.೭ರಂದು ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಿ ತನಿಖಾಧಿಕಾರಿಗಳು ಸಮರ್ಪಕ ತನಿಖೆ ನಡೆಸಿಲ್ಲ ಎಂದು ಪುಟ ಸಂಖ್ಯೆ 6 ರಿಂದ 22ರವರೆಗೆ ವಿವರವಾದ ವರದಿ ಬರೆದು ಜಿಲ್ಲಾ ಪೊಲೀಸ್ ಅಧಿಕಾರಿಯವರಿಗೆ ಆದೇಶವನ್ನು ಕಳುಹಿಸಿರುತ್ತಾರೆ ಎಂದು ಹೇಳಿದರು.
ನಂತರ ದಲಿತ ಸಂಘಟನೆಗಳ ಒತ್ತಡದಿಂದಾಗಿ, ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಗನಾ ಪಿ ಕುಮಾರ್ ಇವರಿಗೆ ವಹಿಸಿರುತ್ತಾರೆ. ಇವರು ಕೂಡಾ ಸರಿಯಾಗಿ ತನಿಖೆ ನಡೆಸದೆ , ಆರೋಪಿಗಳ ಸಂಬಂಧಿಗಳ ಸಾಕ್ಷ್ಮವನ್ನು ತೆಗೆದುಕೊಂಡಿದ್ದಾರೆ. ಘಟನಾ ಸ್ಥಳದ ಮೊಬೈಲ್ ಟವರ್’ ದಾಖಲೆ ಯಾವುದನ್ನೂ ಸಂಗ್ರಹ ಮಾಡದೆ ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ, ನಾವು ದಾಖಲೆಯ ಪೋಟೋಗಳನ್ನು ಸಲ್ಲಿಸಿದ್ದೇವೆ. ಸಂಘಟನೆಗಳು ಕಾನೂನು ಮತ್ತು ಸಂಘಟನಾತ್ಮಕ ಹೋರಾಟ ಮಾಡಿ ಬಡ ಕುಟುಂಬಕ್ಕೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದೀಗ ಮುಖಂಡರು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ ಸಿ.ಐ.ಡಿ ತನಿಖೆಗೆ ಒತ್ತಾಯಿಸಿದ್ದೇವು. ಸಂಘಟನೆಯ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದ್ರಿ ಪ್ರಕರಣವನ್ನು ಸಿ.ಒ.ಡಿ ತನಿಖೆಗೆ ಆದೇಶಿಸಿರುತ್ತಾರೆ ಎಂದು ಹೇಳಿದರು.
ದ.ಸಂ.ಸ ರಾಜ್ಯ ಮುಖಂಡ ನೇಮಿರಾಜ ಕಿಲ್ಲೂರು ಸ್ವಾಗತಿಸಿ, ದ.ಸಂ.ಸ ಅಂಬೇಡ್ಕರ್‌ವಾದ ಬೆಳ್ತಂಗಡಿ ತಾಲೂಕು ಸಮಿತಿ ಸಂಚಾಲಕರಾದ ರಮೇಶ್ ಆರ್ ವಂದಿಸಿದರು. ಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಉಪ ಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್, ದಲಿತ ಮುಖಂಡರಾದ ರಾಮದಾಸ್ ಮೇರಮಜಲು, ವೆಂಕಣ್ಣ ಕೊಯ್ಯೂರು ಉಪಸ್ಥಿತರಿದ್ದರು.