ಬೆಳ್ತಂಗಡಿ: ಕೋಟ್ಯಾಂತರ ರೂಪಾಯಿಯ ಆರ್ಗ್ಯಾನಿಕ್ ಬ್ಯಾಗ್ ಮಾಡುವ ಯಂತ್ರ ಮತ್ತು ಕಚ್ಚಾಸಾಮಾಗ್ರಿ ನೀಡಿ, ಅದು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದಾಗ ಅದನ್ನು ಹಿಂದಕ್ಕೆ ಪಡೆದು, ಹಣ ಹಿಂದಿರುಗಿಸುವುದಾಗಿ ಹೇಳಿದ್ದು, ಈಗ ಹಣ ನೀಡದೆ ವಂಚಿಸಿರುವುದಾಗಿ ಆರೋಪಿಸಿ ಮಹಿಳೆಯೋರ್ವರು ನೀಡಿದ ದೂರಿನಂತೆ ಎನ್ವಿಗ್ರೀನ್ ಬಯೋಟೆಕ್ ಸಂಸ್ಥೆಯ ಮಾಲಕ ಬಳಂಜ ನಿವಾಸಿ ಅಶ್ವತ್ ಹೆಗ್ಡೆಯವರ ವಿರುದ್ಧ ಅ.12ರಂದು ಬೆಂಗಳೂರಿನ ಅಶೋಕ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಎನ್ವಿಗ್ರೀನ್ ಬಯೋಟೆಕ್ ಸಂಸ್ಥೆ ಸ್ಥಾಪಿಸಿದ್ದ ಬಳಂಜದ ಅಶ್ವತ್ ಹೆಗ್ಡೆಯವರು ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿದ್ದು ತಾನು ತನ್ನ ಸಂಸ್ಥೆಯ ಮೂಲಕ ಆರ್ಗ್ಯಾನಿಕ್ ಬ್ಯಾಗ್ ಮಾಡಲು ಯಂತ್ರವನ್ನು ಮತ್ತು ಕಚ್ಚಾ ಸಾಮಾಗ್ರಿಯನ್ನು, ಕೆಲಸಕ್ಕೆ ಕಾರ್ಮಿಕರನ್ನು ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿ ನನ್ನಿಂದ ಕೋಟ್ಯಾಂತರ ರೂಪಾಯಿ ಪಡೆದು ಯಂತ್ರನೀಡಿದ್ದರು. ಇದು ಸಮರ್ಪಕ ಕಾರ್ಯನಿರ್ವಹಿಸದಿದ್ದಾಗ ಇದನ್ನು ಹಿಂದಕ್ಕೆ ಪಡೆದು ಹಣ ಮರಳಿಸುವುದಾಗಿ ಹೇಳಿದ್ದರೂ, ಇದುವರೆಗೂ ಹಣ ನೀಡಿಲ್ಲ ಎಂದು ಆರೋಪಿಸಿ, ಬೆಂಗಳೂರಿನ ನೀಲಿಮಾ ಎಂಬವರು ನೀಡಿದ ದೂರಿನಂತೆ ಅಶ್ವತ್ಥ ಹೆಗ್ಡೆ ವಿರುದ್ಧ ಬೆಂಗಳೂರಿನ ಅಶೋಕ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಳು ದೂರಿನ ಬಗ್ಗೆ ಮಾಹಿತಿ:
ಮಹಿಳೆ ನೀಲಿಮಾ ಮತ್ತು ಆಕೆಯ ಪತಿ ಕಳೆದು ಒಂದೂವರೆ ತಿಂಗಳಿಂದ ನಿರಂತರವಾಗಿ ಒಂದು ಕೋಟಿ ಹಣಕ್ಕಾಗಿ ಬೇಡಿಕೆಯಿಟ್ಟು, ಬ್ಲಾಕ್‌ಮೇಲ್ ಮಾಡುತ್ತಿರುವ ಕಾರಣ ಅವರ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಹಣ ಮರುಪಾವತಿಯ ಬಗೆಗೆ ಸವಿವರವಾದ ಮಾಹಿತಿಯನ್ನು ಅ.5 ರಂದು ನೀಡಲಾಗಿದೆ. ನ್ಯಾಯಾಲಯದ ದಾವೆಯಲ್ಲಿ ತಡೆಯಾಜ್ಞೆ ನೀಡಲಾಗಿದೆ ಎಂದು ಅಶ್ವಥ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.