ಬೆಳ್ತಂಗಡಿ: ಶ್ರೀ ಗುರುದೇವ ಕಾಲೇಜಿನಲ್ಲಿ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ : ‘ಆರೋಗ್ಯಪೂರ್ಣ ವ್ಯಕ್ತಿ ತನ್ನ ಆರೋಗ್ಯವನ್ನು ಕಾಪಾಡುವ ಜೊತೆಗೆ ರಕ್ತದಾನ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಜಾತಿ ಮತವನ್ನು ಮೀರಿದ ರಕ್ತವನ್ನು ದಾನ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡುವ ಜೊತೆಗೆ ಸಮಾಜದಲ್ಲಿ ಉತ್ತಮ ಆರೋಗ್ಯಯುತ ಬಾಂಧವ್ಯ ಬೆಳೆಸಲು ಸಹಕಾರಿಯಾಗುತ್ತದೆ’ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅವರು ನ.4 ರಂದು ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ, ದಕ್ಷಿಣ ಕನ್ನಡ ಜಿಲ್ಲಾ ವೈದ್ಯಕೀಯ ಶಿಕ್ಷಣದ ಮತ್ತು ಸಂಶೋಧನಾ ಸಹಕಾರಿ ಸಂಘ ನಿಯಮಿತ ಮಂಗಳೂರು, ಶ್ರೀ ಗುರುದೇವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಾ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಈ ಜಗತ್ತಿನಲ್ಲಿ ರಕ್ತವನ್ನು ತಯಾರು ಮಾಡಲು ಸಾಧ್ಯವಿಲ್ಲ. ನಮ್ಮ ದೇಹದೊಳಗೆ ಸದಾ ಉತ್ಪತ್ತಿಯಾಗುವ ರಕ್ತವನ್ನು ದಾನ ಮಾಡಿ ಇನ್ನೊಂದು ಜೀವ ಉಳಿಸುವ ಪುಣ್ಯದ ಕೆಲಸ ಬದುಕಿನುದ್ದಕ್ಕೂ ಮಾಡಬೇಕು’.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರಿದಾಸ್ ಎಸ್.ಎಂ. ಮಾತನಾಡಿ, ‘ರೆಡ್ ಕ್ರಾಸ್ ಸೊಸೈಟಿ ಕರುಣೆಯ ಪ್ರತೀಕ. ಮಾನವ ಜೀವನ ಮತ್ತು ಆರೋಗ್ಯವನ್ನು ಸಂರಕ್ಷಿಸುವ ಕಡೆಗೆ ಸದಾ ಕ್ರಿಯಾಶೀಲವಾಗಿದೆ’ ಎಂದರು.

ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು ಮಾತನಾಡಿ, ‘ನಾವು ಮಾಡುವ ರಕ್ತ ದಾನ ಮತ್ತೊಬ್ಬರ ಜೀವ ಉಳಿಸುವ ಜೊತೆ ಸಮಾಜಕ್ಕೆ ಪ್ರೇರಣೆಯಾಗಬೇಕು. ರಕ್ತದಾನದ ಅರಿವು ಮೂಡಿಸುವ ಕೆಲಸವಾಗಬೇಕು’ ಎಂದರು.

ವೇದಿಕೆಯಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಇದರ ಕಾರ್ಯದರ್ಶಿ ಯಶವಂತ ಪಟವರ್ಧನ್, ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಇದ್ದರು.

ಈ ಸಂದರ್ಭದಲ್ಲಿ ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ( ನಿ) ಹಾಗೂ ದೇಹಾತ್ ಕಂಪೆನಿ ವತಿಯಿಂದ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರಿಂದ ಅನಾನಾಸ್ ಬೆಳೆ ಮಾಹಿತಿ ಪ್ರಚೋದಕ ತಂತ್ರಜ್ಞಾನ ಹಾಗೂ ಮಾರುಕಟ್ಟೆಯ ಕುರಿತು ಹಾಗೂ ಜೇನು ಸಾಕಾಣಿಕೆ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.

ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಸಹಾಯಕಿಯಾಗಿ ನಿವೃತ್ತರಾದ ಕಮಲ ಸಿಸ್ಟರ್ ಅವರನ್ನು ಗೌರವಿಸಲಾಯಿತು. ಒಟ್ಟು 63 ಯುನಿಟ್ ರಕ್ತ ಸಂಗ್ರಹ ಮಾಡಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ವೈದ್ಯಕೀಯ ಶಿಕ್ಷಣದ ಹಾಗೂ ಸಂಶೋಧನಾ ಸಹಕಾರಿ ಸಂಘ ನಿಯಮಿತ ಮಂಗಳೂರು ಇದರ ಅಧ್ಯಕ್ಷ ಶಿವ ಕುಮಾರ್ ಎಸ್.ಎಂ. ಸ್ವಾಗತಿಸಿದರು. ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಪ್ರಸ್ತಾವಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಮನುಜ ಕಾರ್ಯಕ್ರಮ ನಿರೂಪಿಸಿ, ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಸಮೀವುಲ್ಲಾ ವಂದಿಸಿದರು.

Leave a Comment

error: Content is protected !!