ಬೆಳ್ತಂಗಡಿ: ಸರ್ವರಿಗೂ ನ್ಯಾಯವನ್ನು ಒದಗಿಸುವ ಕಾನೂನಿನ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು ಉನ್ನತ ಜೀವನವನ್ನು ನಡೆಸುವಂತವರಾಗಬೇಕು ಎಂದು ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂದೇಶ. ಕೆ ಹೇಳಿದರು.
ಅವರು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಕುರಿತು ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ವಕೀಲರ ಸಂಘ ಬೆಳ್ತಂಗಡಿ ಹಾಗೂ ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ಕಾನೂನು ಸಾಕ್ಷರತಾ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ದೇಶದಲ್ಲಿರುವ ಪ್ರತಿಯೊಬ್ಬರೂ ನಮ್ಮ ಸಂವಿಧಾನವನ್ನು ಗೌರವಿಸಿ ಕಾನೂನಿನ ಚೌಕಟ್ಟಿನೊಳಗೆ ಜೀವನ ಮಾಡಬೇಕು. ಕಾನೂನು ಸಲಹೆಗಳನ್ನು ಪಡೆದುಕೊಳ್ಳಬೇಕು. ಕಡಿಮೆ ಆದಾಯವುಳ್ಳವರಿಗೆ ನ್ಯಾಯಾಲಯದಿಂದ ಸಿಗುವ ಉಚಿತ ಕಾನೂನು ಸೇವೆಯನ್ನು ಸದುಪಯೋಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಯಾವುದೇ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದರು.
ವಾಣಿ ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿಯ ಹಿರಿಯ ವಕೀಲರಾದ ಶಿವಕುಮಾರ್ ಎಸ್ ಎಂ. ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕುರಿತು ಮಾಹಿತಿ ನೀಡಿದರು. ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯೇಂದ್ರ ಟಿ ಹೆಚ್,ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ,ಕಾರ್ಯದರ್ಶಿ ನವೀನ್ ಬಿ ಕೆ, ವಾಣಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಗೌಡ ಉಪಸ್ಥಿತರಿದ್ದರು.
ವಾಣಿ ಕಾಲೇಜಿನ ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಸ್ವಾಗತಿಸಿದರು. ಕಾನೂನು ಸಾಕ್ಷರತಾ ಸಂಘದ ಸಂಯೋಜಕಿ ಶ್ರೀಮತಿ ಮೀನಾಕ್ಷಿ ಧನ್ಯವಾದವಿತ್ತರು. ವಿದ್ಯಾರ್ಥಿನಿ ಕುಮಾರಿ ಸನುಷಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.