ಬೆಳ್ತಂಗಡಿ: ಉಜಿರೆ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ನಿರ್ಮಿಸಲು ಉದ್ದೇಶಿಸಲಾದ ವಿದ್ಯುತ್ ಉಪಕೇಂದ್ರಕ್ಕೆ 0.96 ಎಕ್ರೆ ಜಾಗವನ್ನು ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ(ಮೆಸ್ಕಾಂ) ಇವರಿಗೆ ಮಂಜೂರುಗೊಳಿಸಿ ದ.ಕ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಉಜಿರೆ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ 33/11 ಕೆ.ವಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಈಗಾಗಲೇ ಮೆಸ್ಕಾಂ ಯೋಜನೆ ರೂಪಿಸಿ ಸರಕಾರಕ್ಕೆ ಕಳುಹಿಸಿದ್ದು, ಇದಕ್ಕೆ ಸರಕಾರದಿಂದ ಈಗಾಗಲೇ ಮಂಜೂರಾತಿ ದೊರಕಿದೆ. ಅಲ್ಲದೆ ಉಪಕೇಂದ್ರಕ್ಕೆ ಉಜಿರೆ ಗ್ರಾಮದ ಸರ್ವೆ ನಂಬ್ರ 393/3ರಲ್ಲಿ 0.96 ಎಕ್ರೆ ಜಮೀನು ಮಂಜೂರಾತಿಗೆ ಮೆಸ್ಕಾಂ ಇಲಾಖೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಮೆಸ್ಕಾಂ ಪ್ರಸ್ತಾವನೆಯಿಂದ ಇದೀಗ ಜಿಲ್ಲಾಧಿಕಾರಿಗಳು ನಿನ್ನಿಕಲ್ಲಿನಲ್ಲಿ 0.96 ಎಕ್ರೆ ಜಾಗವನ್ನು ಮಂಜೂರುಗೊಳಿಸಿ ಆದೇಶ ನೀಡಿದ್ದಾರೆ.
ಸ್ಥಳ ಮೌಲ್ಯ ಪಾವತಿಗೆ ಸೂಚನೆ:
ಸರಕಾರದಿಂದ ಇಲಾಖೆಗೆ ಮಂಜೂರಾದ 0.96 ಎಕ್ರೆ ಜಾಗಕ್ಕೆ ಸ್ಥಳ ಮೌಲ್ಯ ಮತ್ತು ಇತರ ಶುಲ್ಕವನ್ನು ಪಾವತಿಸಲು ಆದೇಶದಲ್ಲಿ ತಿಳಿಸಲಾಗಿದೆ. ಸ್ಥಳ ಮೌಲ್ಯ ರೂ.46,66,732 ಹಾಗೂ ಭೂ ಪರಿವರ್ತನೆ ಶುಲ್ಕ ರೂ.20,928ಮತ್ತು ಅಳತೆ ಶುಲ್ಕ ರೂ.55 ಸೇರಿದಂತೆ ಒಟ್ಟು ರೂ.46,87,715 ಒಂದು ತಿಂಗಳ ಒಳಗೆ ಪಾವತಿಸುಂತೆ ಆದೇಶದಲ್ಲಿ ತಿಳಿಸಲಾಗಿದೆ.
ಇದರಿಂದಾಗಿ ಉಜಿರೆ ಗ್ರಾಮದ ನಿನ್ನಿಕಲ್ಲಿನಲ್ಲಿ 33/11 ಕೆ.ವಿ ವಿದ್ಯುತ್ ಉಪಕೇಂದ್ರ ಶೀಘ್ರವಾಗಿ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಈ ಫೀಡರ್‌ಗೆ 10 ಎಂವಿಎ ಸಾಮರ್ಥ್ಯದ ಶಕ್ತಿ ಪರಿವರ್ತಕ ಅಳವಡಿಸಲಾಗುತ್ತದೆ. ಈ ಉಪಕೇಂದ್ರ ಆರಂಭವಾದರೆ ಬೆಳಾಲು ಮತ್ತು ಉಜಿರೆ ಗ್ರಾಮದ ಸುಮಾರು 25 ಸಾವಿರ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ. ಈಗ ಉಜಿರೆ ಮತ್ತು ಬೆಳಾಲು ಗ್ರಾಮದಲ್ಲಿ ಎರಡು ಮಾತ್ರ ವಿದ್ಯುತ್ ಫೀಡರ್‌ಗಳಿವೆ. ನೂತನ ಉಪಕೇಂದ್ರ ಆರಂಭವಾದ ಬಳಿಕ ವಿದ್ಯುತ್ ಫೀಡರ್‌ಗಳ ಸಂಖ್ಯೆಯನ್ನು ಆರಕ್ಕೆ ಏರಿಸಲಾಗುತ್ತದೆ. ಈಗ ಬೆಳಾಲು, ಉಜಿರೆಗೆ ಬೆಳ್ತಂಗಡಿ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುತ್ತಿರುವುದರಿಂದ ಇಲ್ಲಿಬೇಸಿಗೆ ಕಾಲದಲ್ಲಿ ಲೋವೋಲ್ಟೇಜ್ ಸಮಸ್ಯೆಯಿದ್ದು, ಇದು ನಿವಾರಣೆಯಾಗಲಿದೆ.