ಉಜಿರೆ: ಎಲ್ಲಾ ಮುಸ್ಲಿಮರು ಪವಿತ್ರ ಕುರ್‌ಆನ್ ಮತ್ತು ಸುನ್ನತ್ ಆದೇಶಿಸಿದ ಪ್ರಕಾರ ಜೀವಿಸಬೇಕು. ಈಗಿನ ತಥಾಕಥಿತ ಮುಸ್ಲಿಂ ಪಂಡಿತರು ತಮಗೆ ತೋರಿದ ರೀತಿಯಲ್ಲಿ ಇಸ್ಲಾಂನ ಒಳಗೆ ಇಲ್ಲದ ಅನಾಚಾರಗಳನ್ನು ತಂದು ಯತಾರ್ಥ ಇಸ್ಲಾಂ ಎಂದರೆ ಏನೆಂದು ತಿಳಿಯದ ಪರಿಸ್ಥಿತಿ ಉಂಟಾಗಿದೆ. ಆದುದರಿಂದ ಮುಸ್ಲಿಮರು ಪವಿತ್ರ ಕುರ್‌ಆನ್ ಹಾಗೂ ದೃಢಪಟ್ಟ ಹದೀಸ್‌ಗಳ ಪ್ರಕಾರ ತಮ್ಮ ಜೀವನವನ್ನು ಕ್ರಮೀಕರಿಸಬೇಕಾಗಿದೆ ಎಂದು ಕೇರಳದ ಮುಸ್ಲಿಂ ವಿದ್ವಾಂಸ ಹಾಗೂ ವಾಗಿ ಮೌಲವಿ ಸ್ವಲಾಹುದ್ದೀನ್ ಚುಝುಲಿ ಅವರು ಕರೆಯಿತ್ತರು.
ಅವರು ಉಜಿರೆ ಕುಂಟಿನಿಯಲ್ಲಿ ನ. 19 ರಂದು ಸೌತ್ ಕರ್ನಾಟಕ ಸಲಫೀ ಮೂವ್‌ಮೆಂಟ್, ಉಜಿರೆ ಘಟಕವು ಆಯೋಜಿಸಿದ್ದ ಸಲಫೀ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸಮಾವೇಶದ ಆರಂಭದಲ್ಲಿ ಎಸ್‌ಕೆಎಸ್‌ಎಂ ಕೇಂದ್ರ ಸಮಿತಿಯ ಅಧ್ಯಕ್ಷರಾದ ಬಶೀರ್ ಅಹಮದ್ ಶಾಲಿಮಾರ್ ಅಧ್ಯಕ್ಷೀಯ ಭಾಷಣ ಮಾಡಿದರು.
ವೇದಿಕೆಯಲ್ಲಿ ಎಸ್‌ಕೆಎಸ್‌ಎಂ ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಅಬ್ಬರಹ್ಮಾನ್ ಉಪ್ಪಿನಂಗಡಿ, ರಿಯಾಝ್ ಅಹಮದ್, ಅಬ್ದುಲ್ ಸತ್ತಾರ್ ಆಸ್ಕೋ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನೌಫಲ್ ಕೊಕ್ಕಡ ನಿರ್ವಹಿಸಿದರು. ಉಜಿರೆ ಎಸ್.ಕೆ.ಎಸ್.ಎಂ. ಘಟಕದ ಅಧ್ಯಕ್ಷ ಕೆ.ಎಚ್.ಇಬ್ರಾಹಿಂ, ಕಾರ್ಯದರ್ಶಿ ಫಾರೂಕ್ ಕೊಟ್ರೋಡಿ, ದಾವಾ ಕಾರ್ಯದರ್ಶಿ ಅಶ್ರಫ್ ಇಕ್ಬಾಲ್ ಹಾಗೂ ಇತರ ಸದಸ್ಯರ ನೇತೃತ್ವದಲ್ಲಿ ಸಮಾವೇಶವು ಜನ ಮನ್ನಣೆಯನ್ನು ಪಡೆಯಿತು.
ಯುವಕರು ಡ್ರಗ್ಸ್, ದುಶ್ಚಟಗಳ ದಾಸರಾಗಬಾರದು ಮೌಲವಿ ಶಿಹಾಬ್ ತಲಪಾಡಿ ಇವರು ಮಾತನಾಡುತ್ತಾ, ಈಗಿನ ಹೆಚ್ಚಿನ ಮುಸ್ಲಿಂ ಯುವಕರು ಡ್ರಗ್ಸ್ ಮುಂತಾದ ದುಶ್ಚಟಗಳ ದಾಸರಾಗಿದ್ದು, ಅದರಿಂದ ಉಂಟಾಗುವ ಅನಾಹುತಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಇದೆ ಎಂದು ಹೇಳಿದರು. ಡ್ರಗ್ಸ್ ಸೇವನೆಯಿಂದಾಗಿ ಉಂಟಾಗುವ ಹಲವಾರು ಅನಾಹುತಗಳ ಬಗ್ಗೆ ವಿವರಿಸಿ, ಎಲ್ಲಾ ಯುವಕರು ಅದರಿಂದ ಸಂಪೂರ್ಣ ಮುಕ್ತರಾಗಿ, ಇಸ್ಲಾಂ ಆದೇಶಿಸಿದ ಪ್ರಕಾರ ಜೀವನವನ್ನು ನಡೆಸಿದಲ್ಲಿ ಖಂಡಿತಾ ಮನಸ್ಸಿಗೆ ನೆಮ್ಮದಿ ಹಾಗೂ ಇಹ-ಪರ ಜೀವನದಲ್ಲಿ ಯಶಸ್ಸು ಲಭಿಸುವುದು ಎಂದು ಉಪದೇಶಿಸಿದರು.