ಬೆಳ್ತಂಗಡಿ: ಕಾಂತರಾಜು ಆಯೋಗದ ವರದಿ ಬಿಡುಗಡೆಗೊಳಿಸಬೇಕು, ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವುದು ಮತ್ತು ಮುಸ್ಲಿಮರ 2 ಬಿ ಮೀಸಲಾತಿಯ ಗೊಂದಲ ನಿವಾರಣೆ ಮಾಡಿ ಮೀಸಲಾತಿ ಪ್ರಮಾಣವನ್ನು ಕನಿಷ್ಠ ಪಕ್ಷ ಶೇಕಡಾ 8ಕ್ಕೆ ಏರಿಸಲು ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಅವರನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷ ನವಾಝ್ ಕಟ್ಟೆ ಅವರ ನಿಯೋಗ ಮಂಗಳೂರಿನ ಜಿಲ್ಲಾ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಹರೀಶ್ ಕುಮಾರ್ ಅವರು ಈ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಮದ್ದ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಹನೀಫ್ ಪುಂಜಾಲಕಟ್ಟೆ, ಕಾರ್ಯದರ್ಶಿ ನಿಸಾರ್ ಕುದ್ರಡ್ಕ, ಕೋಶಾಧಿಕಾರಿ ಅಶ್ರಫ್ ಕಟ್ಟೆ ಉಪಸ್ಥಿತರಿದ್ದರು.
ಮನವಿ ಪತ್ರದಲ್ಲಿ ಏನಿದೆ?
ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ರಾಜ್ಯದ ಎಲ್ಲ ಜಾತಿ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಮತ್ತು ಅಂಕಿ ಅಂಶಗಳ ಸಮೇತವಾದ ವರದಿಗಾಗಿ ಕಾಂತರಾಜ್ ಆಯೋಗವನ್ನು ರಚಿಸಲಾಗಿತ್ತು. ಆಯೋಗವು ಹಲವು ರೀತಿಯಲ್ಲಿ ಶೋಷಣೆಗೊಳಗಾಗಿರುವ ಜಾತಿ ಸಮುದಾಯಗಳ ವಾಸ್ತವ ಸ್ಥಿತಿಗಳ ಬಗ್ಗೆ ಅಂಕಿ ಅಂಶಗಳ ಸಮೇತವಾದ ವರದಿ ನೀಡಿದೆ ಎಂದು ಆಯೋಗದ ಮುಖ್ಯಸ್ಥರೇ ಹೇಳಿಕೊಂಡಿದ್ದಾರೆ. ಸುಮಾರು ೧೬೭ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಖರ್ಚು ಮಾಡಿರುವ ಕಾಂತರಾಜ್ ಆಯೋಗದ ಸಮೀಕ್ಷಾ ವರದಿಯನ್ನು ಸ್ವೀಕರಿಸಲು ಸರ್ಕಾರವು ಇಲ್ಲದ ನೆಪ ಹೇಳಿಕೊಂಡು ಬರುತ್ತಿದೆ. ಕಾಂತರಾಜ್ ವರದಿಯನ್ನು ಕೂಡಲೇ ಸ್ವೀಕರಿಸಿ ಸಾರ್ವಜನಿಕ ಗೊಳಿಸಬೇಕೆಂದು ಎಸ್‌ಡಿಪಿಐ ಆಗ್ರಹಿಸುತ್ತದೆ.
ಪರಿಶಿಷ್ಟರ ಮೀಸಲಾತಿ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಮಗೆ ಒಳಮೀಸಲಾತಿ ಬೇಕು ಎನ್ನುವ ಅವರ ಬೇಡಿಕೆಯ ಹೋರಾಟವು ಸುಮಾರು 30 ವರ್ಷಗಳಿಂದ ನಡೆಯುತ್ತಿದೆ. ಈ ನಿಟ್ಟಿನಲ್ಲಿ ರಚನೆಯಾಗಿದ್ದ ಸದಾಶಿವ ಆಯೋಗವು ಒಳಮೀಸಲಾತಿಗೆ ಶಿಫಾರಸ್ಸು ಮಾಡಿರುವ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಿ ದಶಕವೇ ಆಗಿದೆ. ಆದರೇ ಆಡಳಿತ ಸರ್ಕಾರಗಳು ಒಳಮೀಸಲಾತಿ ಅನುಷ್ಠಾನಕ್ಕಾಗಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದೆ, ಅವರ ನ್ಯಾಯಯುತ ಬೇಡಿಕೆಯನ್ನು ಕಡೆಗಣಿಸಿದೆ. ಆದ್ದರಿಂದ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು.
ರಾಜ್ಯದಲ್ಲಿ ಸುಮಾರು 17% ಜನಸಂಖ್ಯೆ ಹೊಂದಿರುವ ಮುಸಲ್ಮಾನರಿಗೆ ಇದುವರೆಗೂ ಜಾರಿಯಲ್ಲಿದ್ದ 4% ಮೀಸಲಾತಿಯನ್ನು ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ರದ್ದು ಮಾಡಿತ್ತು. ಸರ್ಕಾರದ ಈ ಸಂವಿಧಾನ ವಿರೋಧಿ ನಿರ್ಧಾರವನ್ನು ಹೈ ಕೋರ್ಟ್ ತಡೆ ಹಿಡಿದಿದೆಯಾದರೂ ಮೀಸಲಾತಿ ಮುಂದುವರಿಕೆಯಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಗೊಂದಲ ಉಂಟು ಮಾಡುತ್ತಿದ್ದಾರೆ. ಗೊಂದಲ ನಿವಾರಣೆಗಾಗಿ ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ತಡ ಮಾಡುತ್ತಿರುವುದು ಮುಸಲ್ಮಾನರ ವಿರೋಧಿ ನಡೆಯನ್ನು ತೋರಿಸುತ್ತದೆ. ಮುಸಲ್ಮಾನರ ಮೀಸಲಾತಿ ಪ್ರಮಾಣವನ್ನು 4% ನಿಂದ 8% ಗೆ ಹೆಚ್ಚು ಮಾಡಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸುತ್ತೇವೆ.