ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ವತಿಯಿಂದ ಉಜಿರೆಯಲ್ಲಿ ಯಕ್ಷ ಸಂಭ್ರಮ

Suddi Udaya

ಉಜಿರೆ: ಯಕ್ಷಧ್ರುವ ಪಟ್ಲಘಟಕ ಬೆಳ್ತಂಗಡಿ ವತಿಯಿಂದ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ರಥ ಬೀದಿಯಲ್ಲಿ ಯಕ್ಷ ಸಂಭ್ರಮ-2023 ಶನಿವಾರ ರಾತ್ರಿ ಜರಗಿತು.

ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ “ಜ್ಞಾನದ ಭಂಡಾರವಾದ ವೇದ, ಉಪನಿಷತ್ತು, ಪುರಾಣ ಕಥೆಗಳು ಯಕ್ಷಗಾನದ ಮೂಲಕ ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ. ನಮ್ಮ ದೇಶದ ಸಂಸ್ಕೃತಿ, ಧರ್ಮ ರಕ್ಷಣೆಯಲ್ಲಿ ಯಕ್ಷಗಾನದ ಪಾತ್ರವು ಅನನ್ಯವಾದದು” ಎಂದು ಹೇಳಿದರು.

ಜಮ್ಮು ಕಾಶ್ಮೀರ ಸರಕಾರದ ಪ್ರಿನ್ಸಿಪಾಲ್ ಸೆಕ್ರೆಟರಿ ಹಿರಿಯಡ್ಕ ರಾಜೇಶ್ ಪ್ರಸಾದ್ ಮಾತನಾಡಿ “ಕರಾವಳಿಯ ವಿಶಿಷ್ಟ ಕಲೆಯಾದ ಯಕ್ಷಗಾನದ ಮೇಲೆ ಜನರ ಪ್ರೀತಿ,ವಿಶ್ವಾಸ ನಿರಂತರ ಇರಬೇಕು. ಇಂದಿನ ಜೀವನ ಶೈಲಿಯಲ್ಲಿ ಜನರಲ್ಲಿ ದೇವ-ದಾನವ ಎರಡು ಗುಣಗಳು ಸೇರಿವೆ. ದಾನವ ಗುಣಕ್ಕೆ ಎಂದು ಜಯವಿಲ್ಲ ಎಂಬುದನ್ನು ಯಕ್ಷಗಾನ ತಿಳಿಸಿಕೊಡುತ್ತದೆ. ಅಂತರಾತ್ಮದಲ್ಲಿರುವ ಕೆಟ್ಟ ಗುಣಗಳನ್ನು ತೊಡೆದುಹಾಕಿ ಮುನ್ನಡೆದರೆ ಜೀವನ ಸಾರ್ಥಕತೆ ಪಡೆಯುತ್ತದೆ” ಎಂದರು.

ಯಕ್ಷಧ್ರವ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ “ಭಾರತದ ಮುಕುಟ ಪ್ರಾಯವಾದ ಜಮ್ಮು ಕಾಶ್ಮೀರದ ವೈಷ್ಣೋದೇವಿಯಲ್ಲು ಈ ಬಾರಿ ನವರಾತ್ರಿಯ ಸಂದರ್ಭ ಯಕ್ಷಗಾನ ತನ್ನ ಛಾಪನ್ನು ಮೂಡಿಸಿದೆ.ದಾನಿಗಳ ಸಹಕಾರದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರಿಗೆ ವಿಶೇಷ ಶಕ್ತಿಯನ್ನು ನೀಡಲು ಶ್ರಮಿಸುತ್ತಿದೆ”ಎಂದರು.ಯಕ್ಷ ಪಟ್ಲ ಘಟಕ ಬೆಳ್ತಂಗಡಿಯ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.

ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ ಆಳ್ವಾ, ಎಂಎಲ್ ಸಿ ಪ್ರತಾಪ ಸಿಂಹ ನಾಯಕ್, ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಕಿರಣ ಕಾರಂತ್ ಶುಭ ಹಾರೈಸಿದರು.ಬೆಳ್ತಂಗಡಿ ಘಟಕದ ಗೌರವ ಸಲಹೆಗಾರ ಭುಜಬಲಿ ಧರ್ಮಸ್ಥಳ, ಕಾರ್ಯದರ್ಶಿ ಶಿತಿಕಂಠ ಭಟ್,ಕೋಶಾಧಿಕಾರಿ ಆದರ್ಶ್ ಜೈನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಸ್ವಾಗತಿಸಿದರು.ಉಜಿರೆ ಗ್ರಾಫಂ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ ವಂದಿಸಿದರು.-ಪ್ರಶಸ್ತಿ ಪ್ರದಾನ-ಯಕ್ಷಗಾನ ಕಲಾವಿದ ಮೋಹನ್ ಬೈಪಾಡಿತಾಯ, ರಾಷ್ಟ್ರ ಪ್ರಶಸ್ತಿ ವಿಜೇತ ಭತ್ತದ ತಳಿ ಸಂರಕ್ಷಕ ಕೃಷಿಕ ಬಿ.ಕೆ. ದೇವರಾಯ ಅಮೈ,ಯಕ್ಷಗಾನ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆಯವರಿಗೆ ಯಕ್ಷ ಸಂಭ್ರಮ- 2023 ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬದುಕು ಕಟ್ಟೋಣ ಬನ್ನಿ ತಂಡದ ರೂವಾರಿ ಮೋಹನ್ ಕುಮಾರ್ ಉದ್ಯಮಿಗಳಾದ ಅರ್ಚನಾ ರಾಜೇಶ್ ಪೈ ಮತ್ತು ಭರತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಜನಸಾಗರ-22 ಭಜನಾ ತಂಡಗಳ ಕುಣಿತ ಭಜನೆ,ಚಂಡೆ, ಬ್ಯಾಂಡ್,ಕೊಂಬು,ಸ್ಯಾಕ್ಸೋ ಫೋನ್, ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ಉಜಿರೆಯ ಒಶಿಯನ್ ಪರ್ಲ್ ನಿಂದ ಜನಾರ್ದನ ದೇವಸ್ಥಾನದವರೆಗೆ ವೈಭವದ ಮೆರವಣಿಗೆ ಜರಗಿತು.ಬಳಿಕ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಜರಗಿತು.

ಏಕಕಾಲದಲ್ಲಿ 10 ಮಹಿಷಾಸುರರ ಪ್ರವೇಶ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಯಕ್ಷಗಾನ ಪ್ರದರ್ಶನಗಳಿಗೆ ಪ್ರೇಕ್ಷಕರ ಕೊರತೆ ಇರುವ ಇಂದಿನ ಕಾಲದಲ್ಲಿಯೂ 15000 ಕ್ಕಿಂತ ಅಧಿಕ ಮಂದಿ ಭಾಗವಹಿಸಿದ್ದು ವಿಶೇಷವಾಗಿತ್ತು ಆಗಮಿಸಿದ ಎಲ್ಲಾ ಪ್ರೇಕ್ಷಕರಿಗೆ 21 ಬಗೆಯ ವಿಶೇಷ ಖಾದ್ಯಗಳನ್ನು ಹಲವು ಕೌಂಟರ್ ಗಳ ಮೂಲಕ ಪೂರೈಸಲಾಯಿತು.

Leave a Comment

error: Content is protected !!