ಮೇಲಂತಬೆಟ್ಟು : ಇಲ್ಲಿಯ ಮುಂಡೂರು ಗ್ರಾಮದ ಕೇರಿಯಾರ್ ಗುರುವಪ್ಪ ಸಾಲ್ಯಾನ್ ಅವರಿಗೆ ಸೇರಿದ ಎರಡು ದನದ ಹೆಣ್ಣು ಕರುಗಳ ಮೇಲೆ ಚಿರತೆ ದಾಳಿ ಮಾಡಿದ್ದು, ಎರಡು ಕರುಗಳು ಸಾವನ್ನಪ್ಪಿದ ಘಟನೆ ಡಿ.3ರಂದು ರಾತ್ರಿ ನಡೆದಿದೆ.
ಗುರುವಪ್ಪ ಸಾಲ್ಯಾನ್ ಅವರು ತಮ್ಮ ಮನೆಯ ಸಮೀಪ ಎರಡು ಕರುಗಳನ್ನು ಹಗ್ಗದಿಂದ ಕಟ್ಟಿ ಹಾಕಿದ್ದರು. ರಾತ್ರಿ ಮನೆಯ ಬಳಿ ಆಗಮಿಸಿದ ಚಿರತೆ ಎರಡು ಕರುಗಳ ಮೇಲೂ ದಾಳಿ ಮಾಡಿ, ಕರುಗಳನ್ನು ಕೊಂದು ನಂತರ ಕರುಗಳನ್ನು ತೋಟಕ್ಕೆ ಎಳೆದೊಯ್ದು ಅಲ್ಲಿ ತಿಂದು ಹಾಕಿರುವುದಾಗಿ ತಿಳಿದು ಬಂದಿದೆ. ಸಾವನ್ನಪ್ಪಿದ ಕರುಗಳ ಮೌಲ್ಯ ರೂ.30 ಸಾವಿರಗಳಾಗಬಹುದೆಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಮುಂಡೂರು ಗ್ರಾ.ಪಂ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಸದಸ್ಯ ಸಂತೋಷ್ ಕುಮಾರ್ ಮುಂಡೂರು, ಕಾರ್ಯದರ್ಶಿ ನಿರ್ಮಲ್‌ಕುಮಾರ್, ಬೆಳ್ತಂಗಡಿ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಯ್ಕ, ವೈದ್ಯಾಧಿಕಾರಿ ವಿಶ್ವನಾಥ್, ಅರಣ್ಯ ರಕ್ಷಕ ಮಂಜುನಾಥ್, ವಾಚರ್ ಪೂವಪ್ಪ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುಮಾರು ಒಂದೂವರೆ ತಿಂಗಳ ಹಿಂದೆ ಇದೇ ರೀತಿ ರಾತ್ರಿ ಬಂದ ಚಿರತೆ ಹೆಣ್ಣು ಕರುವೊಂದರ ಮೇಲೆ ದಾಳಿ ನಡೆಸಿ ತಿಂದು ಹಾಕಿತ್ತು. ಇದರ ಬಗ್ಗೆಯೂ ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು.