ಉಜಿರೆ: ಜಿಲ್ಲಾ ಮಟ್ಟದ ಶ್ರೀಮದ್ಭಗವದ್ಗೀತಾ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ

Suddi Udaya

ಭಗವದ್ಗೀತೆಯಲ್ಲಿ ಇರುವಂತಹ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರೀ ಕೃಷ್ಣ ಹೇಳಿದಂತೆ “ನಿನ್ನ ಕೆಲಸವನ್ನು ಫಲಾಪೇಕ್ಷೆ ಇಲ್ಲದೆ ಶ್ರದ್ಧೆಯಿಂದ ಮಾಡು” ಎಂದಿರುವುದು ಸಾರ್ವಕಾಲಿಕ ಹಿತನುಡಿ. ಇಂತಹ ಚಿಂತನೆಗಳು ಸಮಾಜದ ಪರಿವರ್ತನೆಗೆ ಸಹಾಯವಾಗುತ್ತದೆ. ಇದು ಜೀವನಕ್ಕೆ ಅಡಿಪಾಯವೂ ಹೌದು. ಭಗವದ್ಗೀತೆಯು ಇದಕ್ಕಾಗಿಯೇ ಎಲ್ಲ ಜಾತಿ ಧರ್ಮಗಳಿಗೂ ಆದರ್ಶ ಗ್ರಂಥ. ವಿದೇಶದ ಹಾರ್ಡ್ವರ್ಡ್ ವಿಶ್ವವಿದ್ಯಾಲಯದಲ್ಲಿ ಇದೊಂದು ಪಠ್ಯವಾಗಿದೆ. ಇಲ್ಲಿಯೂ ಆಗಬೇಕಾಗಿದೆ. ಅದೂ ಅಲ್ಲದೆ ನಮ್ಮ ದಿನಚರಿ ಗೀತೆಯ ಪಠಣದಿಂದ ಆರಂಭವಾಗಲಿ ಎಂದು ನಾವೂರಿನ ವೈದ್ಯ ಹಾಗೂ ಚಿಂತಕ ಡಾ.ಪ್ರದೀಪ ಆಟಿಕುಕ್ಕೆ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕನ್ನಡಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ, ಪ್ರೌಢಶಾಲಾ, ಪದವಿಪೂರ್ವ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಶ್ರೀಮದ್ಭಗವದ್ಗೀತಾ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡುತ್ತಿದ್ದರು.

ಅಭ್ಯಾಗತರಾದ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರು ಮಾತನಾಡಿ ಭಗವದ್ಗೀತೆ ಕೇವಲ ಒಂದು ಗ್ರಂಥವಲ್ಲ. ಇದೊಂದು ಸಾರ್ವಕಾಲಿಕ ಮಾನವ ಸಂದೇಶ ಸಾರುವ ಭಗವಂತನ ನಲ್ನುಡಿ. ಸ್ವಸ್ಥ ಸಮಾಜವನ್ನು ಕಟ್ಟಲು ಇದರ ತಿರುಳನ್ನು ಎಲ್ಲರೂ ತಿಳಿಯಬೇಕು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ಮಾತನಾಡಿ ಗೀತೆಯು ಮಾನವ ಜೀವನಕ್ಕೆ ಹೊಸ ಪ್ರೇರಣೆ ನೀಡುತ್ತದೆ. ಮನಸ್ಸಿನ ನಿಯಂತ್ರಣಕ್ಕೆ ಇದೊಂದು ದಿವ್ಯೌಷಧ ಹಾಗೂ ಇದು ನಮ್ಮ ದೇಶದ ದೊಡ್ಡ ಸಂಪತ್ತಾಗಿದ್ದು ಇದನ್ನು ಉಳಿಸಿ ಬೆಳೆಸಬೇಕು ಎಂದರು.
ಕಾರ್ಯಕ್ರಮದ ತರುವಾಯ ಆಗಮಿಸಿದ ವಿಧಾನಪರಿಷತ್ ಸದಸ್ಯ ಭೋಜೆ ಗೌಡ ಅವರು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಸುರತ್ಕಲ್ಲಿನ ಉದ್ಯಮಿ ಉಮೇಶ್ ಹೆಗಡೆ ಅವರು ಬಹುಮಾನ ವಿಜೇತರಿಗೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಹತ್ತನೇ ಅಧ್ಯಾಯವಾದ ವಿಭೂತಿಯೋಗದ ಸಾಮೂಹಿಕ ಭಗವದ್ಗೀತಾ ಪಠಣ ನಡೆಯಿತು. ಹಾಗೂ ಕಂಠಪಾಠ , ಭಾಷಣ ಹಾಗೂ ರಸಪ್ರಶ್ನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.

ಸಮಿತಿಯ ಸದಸ್ಯರಾದ ಕುಸುಮಾಕರ ಕಳಂಜ , ಅವಿನಾಶ ಗೋಖಲೆ , ಹರೀಶ್ ಕುಮಾರ್ , ಮಧುಸೂದನ್, ಭಾಗ್ಯಲಕ್ಷ್ಮಿ , ಕಾರ್ತಿಕೇಶ , ಸುಧಾಶ್ರೀ , ದಿವ್ಯಾ ಮರಾಠೆ ಹಾಗೂ ಅಭಿಜ್ಞಾ ಉಪಾಧ್ಯಾಯ ಅಭ್ಯಾಗತರನ್ನು ಗೌರವಿಸಿದರು.

ಸ್ಪರ್ಧಾ ಕಾರ್ಯಕ್ರಮದ ಸಂಚಾಲಕರಾದ ಎಸ್ ಡಿ ಎಮ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಶಿಕ್ಷಕಿ ಸುಜನಾ ಬಹುಮಾನಿತರ ಪಟ್ಟಿ ವಾಚಿಸಿದರು. ದ.ಕ. ಜಿಲ್ಲೆಯ ಭಗವದ್ಗೀತಾ ಅಭಿಯಾನದ ಸಂಯೋಜಕರಾದ ಡಾ.ಮಧುಕೇಶ್ವರ ಶಾಸ್ತ್ರೀ ಧನ್ಯವಾದ ಅರ್ಪಿಸಿದರು.


ಬೆಳ್ತಂಗಡಿ ತಾಲೂಕು ಸಂಯೋಜಕ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಶಿಕ್ಷಕಿ ಭವ್ಯಾ ಹೆಗಡೆ ನಿರೂಪಿಸಿದರು.

Leave a Comment

error: Content is protected !!