25.1 C
ಪುತ್ತೂರು, ಬೆಳ್ತಂಗಡಿ
April 7, 2025
ಪ್ರಮುಖ ಸುದ್ದಿರಾಜ್ಯ ಸುದ್ದಿ

ಶಾಸಕ ಹರೀಶ್ ಪೂಂಜರಿಂದ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡನೆ:ತನಿಖೆಗೆ ಹಕ್ಕುಬಾಧ್ಯತಾ ಸಮಿತಿಗೆ:ಸ್ಪೀಕರ್ ಒಪ್ಪಿಗೆ

ಬೆಳ್ತಂಗಡಿ : ಕಳೆಂಜ ಗ್ರಾಮದ ಲೋಲಾಕ್ಷ ದೇವಣ್ಣ ಅವರ ಮನೆ ಪಂಚಾಂಗವನ್ನು ಕೆಡವಿ ಹಾಕಿದ ಪ್ರಕರಣದಲ್ಲಿ ಶಾಸಕರುಗಳ ಹಕ್ಕುಗಳಿಗೆ ಚ್ಯುತಿಯನ್ನು ಮಾಡಿದ ಡಿ.ಎಫ್.ಓ ಮತ್ತು ಆರ್.ಎಫ್.ಓ., ಎ.ಸಿ.ಎಫ್. ಇವರುಗಳ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ಶಾಸಕ ಹರೀಶ್ ಪೂಂಜ ಅವರು ಹಕ್ಕು ಚ್ಯುತಿ ಮಂಡನೆ ಮಾಡಿದ್ದು, ಶಾಸಕ ಹರೀಶ್ ಪೂಂಜಾ ವಿರುದ್ದ ಅರಣ್ಯ ಇಲಾಖೆ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡು, ಮುಚ್ಚಳಿಕೆ ಬರೆಯಿಸಿಕೊಂಡ ವಿಚಾರ ವಿಧಾನಸಭೆಯಲ್ಲಿ ಭಾರೀ ಗದ್ದಲ ಸೃಷ್ಟಿಸಿತು. ಸದನದಲ್ಲಿ ಬಿಸಿಯೇರಿದ ಚರ್ಚೆ, ಪರ-ವಿರೋಧದ ನಿಲುವು, ಸದನದ ಬಾವಿಗಳಿದು ಬಿಜೆಪಿ ಪ್ರತಿಭಟನೆಯ ಬಳಿಕ ಬಿಜೆಪಿ ಶಾಸಕರ ಒತ್ತಡಕ್ಕೆ – ಮಣಿದು ಸ್ಪೀಕರ್ ಯು.ಟಿ. ಖಾದರ್ ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಿದರು.
ಭೋಜನ ವಿರಾಮದ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರಾದ ವಿ. ಸುನಿಲ್ ಕುಮಾರ್, ಡಾ| ಭರತ್ ಶೆಟ್ಟಿ ವೈ, ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವೇದವ್ಯಾಸ್ ಕಾಮತ್ ಅವರು ವಿಚಾರ ಪ್ರಸ್ತಾವಿಸಿ, ಹಕ್ಕುಚ್ಯುತಿ ವಿಚಾರ ಪ್ರಸ್ತಾವಿಸಲು ಹರೀಶ್ ಪೂಂಜಾ ಅವರಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಆದರೆ ಗಮನ ಸೆಳೆಯುವ ಸೂಚನೆ ಸಂದರ್ಭದಲ್ಲಿ ವಿಷಯ ತೆಗೆದುಕೊಳ್ಳೋಣ ಎಂದು ಸ್ಪೀಕರ್ ಮನವೊಲಿಸಲು ಪ್ರಯತ್ನ ನಡೆಸಿದರು. ಇದಕ್ಕೆ ಒಪ್ಪದ ಬಿಜೆಪಿ ಶಾಸಕರು ಸದನದ ಬಾವಿಗೆ ಧಾವಿಸಿ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.
ಈ ಸಂದರ್ಭ ಅರಣ್ಯ ಸಚಿವ ಈ ಈಶ್ವರ ಖಂಡ್ರೆ ಮಾತನಾಡಿ, ಕಳೆಂಜದ ಲೋಲಾಕ್ಷ ದೇವಣ್ಣ
ಗೌಡ ಅವರು ಮನೆ ಕಟ್ಟಲು ಹೋದ ಜಾಗ ಮೀಸಲು ಅರಣ್ಯದ ಸರ್ವೇ ನಂಬರ್ ೩೦೯/೧ರಲ್ಲಿದೆ. ಇಲ್ಲಿದ್ದ ರಬ್ಬರ್ ಮರ ಕಡಿದು ಅವರು ಮನೆ ಕಟ್ಟಲು ಮುಂದಾದಾಗ ಅಧಿಕಾರಿಗಳು ವಿರೋಧಿಸಿದ್ದಾರೆ. ಇದು ಅತಿಕ್ರಮಣ ನಿರ್ಮಾಣವಾಗಿದೆ. ಈ ಬಗ್ಗೆ ಶಾಸಕ ಹರೀಶ್ ಪೂಂಜ ಅವರು ನನಗೆ ಕರೆ ಮಾಡಿದಾಗ ಜಂಟಿ ಸರ್ವೇ ಮಾಡಿ ಕ್ರಮ ತೆಗೆದುಕೊಳ್ಳೋಣ.ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳೋಣ ಎಂದು, ತಿಳಿಸಿದ್ದೆ. ಆದರೆ ಶಾಸಕ ಪೂಂಜಾ ಅವರು ನಮ್ಮ ನಡುವಿನ ಮೊಬೈಲ್ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಸರಿಯಾದ ಕ್ರಮ ಅಲ್ಲ ಎಂದು ತಿಳಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸುನಿಲ್ ಕುಮಾರ್ ನಿಯಮ ಪ್ರಕಾರ ಹಕ್ಕುಚ್ಯುತಿ ಮಂಡನೆ ಸಂದರ್ಭದಲ್ಲಿ ಸಚಿವರು ಉತ್ತರ ನೀಡುವುದಕ್ಕೆ ಅವಕಾಶವಿಲ್ಲ, ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಬೇಕೆಂದು ಕ್ರಿಯಾಲೋಪ ಎತ್ತಿದರು. ಸಚಿವ ಕೃಷ್ಣಬೈರೇಗೌಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಸ್ಪೀಕರ್ ನಿರ್ಣಯದಿಂದ ಅಸಮಾಧಾನಗೊಂಡ ಸುನಿಲ್ ಕುಮಾರ್ ಅವರು ಡಿ.ಕೆ. ಶಿವಕುಮಾರ್ ಪ್ರಕರಣವನ್ನು ಸಂಪುಟ ಸಭೆಯಲ್ಲಿ ವಾಪಸ್ ಪಡೆದುಕೊಂಡಿದ್ದೀರಿ. ಆದರೆ ಒಬ್ಬ ಶಾಸಕನ ಮೇಲೆ ಪ್ರಕರಣ ದಾಖಲಿಸಿದರೆ ಹಕ್ಕುಚ್ಯುತಿ ಮಂಡನೆಗೂ ಅವಕಾಶ ನೀಡುತ್ತಿಲ್ಲ. ಈ ಕ್ಷಣವೇ ಚರ್ಚೆಗೆ ಅನುಮತಿ ನೀಡದೇ ಇದ್ದರೆ ಅಧಿವೇಶನ ನಡೆಸಲು ಸಾಧ್ಯವಾಗುವುದಿಲ್ಲ. ಶಾಸಕರ ರಕ್ಷಣೆಗೆ ನೀವಲ್ಲದೇ ಇನ್ಯಾರು ಬರುವುದಕ್ಕೆ ಸಾಧ್ಯ ಎಂದು ಎಚ್ಚರಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ವಿಷಯ ಪ್ರಸ್ತಾವಿಸಲು ಸ್ಪೀಕರ್ ಹರೀಶ್ ಪೂಂಜಾ ಅವರಿಗೆ ಅವಕಾಶ ನೀಡಿದರು.
ಹಕ್ಕು ಚ್ಯುತಿ ಮಂಡನೆ ಮಾಡದ ಶಾಸಕರು:
ಕಳೆಂಜ ಗ್ರಾಮದಲ್ಲಿ ದೇವಣ್ಣ ಗೌಡ ಅವರು ಹಲವು ವರ್ಷಗಳಿಂದ ೪-೧೦-೨೦೨೩ರಂದು ವಾಸಿಸುತ್ತಿದ್ದು, ಅವರಿದ್ದ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಹೊಸದಾಗಿ ಮನೆ ಕಟ್ಟಲು ಪಾಯ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿ ನಿರ್ಮಾಣದ ಪಾಯ ಕಿತ್ತು ಹಾಕಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ನಾನು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದೆ. ತತ್‌ಕ್ಷಣ ಅರಣ್ಯ ಸಚಿವರಿಗೆ ಕರೆ ಮಾಡಿದಾಗ ಅವರು ಜಂಟಿ ಸರ್ವೇ ಪ್ರಕ್ರಿಯೆ ನಡೆಸುವುದಾಗಿ ಭರವಸೆ ನೀಡಿದ್ದರು. ಇದಾದ ಮೂರು ದಿನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ೪ ಕೆಎಸ್ ಆರ್‌ಪಿ ವಾಹನದೊಂದಿಗೆ ಸ್ಥಳಕ್ಕೆ ಬಂದು ಕಟ್ಟಡ ನಿರ್ಮಾಣ ತೆರವು ಮಾಡಲು ಮುಂದಾಗಿದ್ದಾರೆ. ಆಗ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರು ಅಲ್ಲಿಗೆ ತೆರಳಿ ವಿರೋಧ ವ್ಯಕ್ತಪಡಿಸಿದಾಗ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕರನ್ನು ಅಧಿಕಾರಿಗಳು ತಳ್ಳಿದ್ದಾರೆ. ಸರಕಾರ ಈ ಪ್ರಕರಣವನ್ನು ಸಮರ್ಥಿಸಿಕೊಳ್ಳಬಾರದು. ಜಿಲ್ಲೆಯ ಇತರ ಜನಪ್ರತಿನಿಧಿಗಳನ್ನು ಬಿಟ್ಟು ನನ್ನೊಬ್ಬನ ಮೇಲೆ ಮಾತ್ರ ಕ್ರಮ ತೆಗೆದುಕೊಂಡಿರುವುದು ಏಕೆ? ಇದು ಉದ್ದೇಶಪೂರ್ವಕವಲ್ಲವೆ. ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಮುಚ್ಚಳಿಕೆ ಬರೆಯಿಸಿಕೊಂಡು ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಿಗಳು ನನ್ನ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದಾರೆ. ಅರಣ್ಯ ಗ್ರಾಮ ಹಕ್ಕು ಕಾಯ್ದೆ ನಿಯಮ ಪಾಲಿಸಿಲ್ಲ. ಉಡಾಫೆ ವರ್ತನೆ ಜತೆಗೆ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಬೇಕೆಂದು ಪಟ್ಟು ಹಿಡಿದರು.
ವಿಪಕ್ಷ ನಾಯಕ ಆರ್ ಅಶೋಕ್ ಅವರು ಮಾತನಾಡಿ, ಅಧಿಕಾರಿಗಳಿಗೆ ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಮನೆ ಕಟ್ಟಿದವರನ್ನು ಬಿಟ್ಟು, ಶಾಸಕರ ಮೇಲೆ ಎಫ್‌ಐಆರ್ ದಾಖಲಿಸಿರುವುದು ಸರಿಯಲ್ಲ ಎಂದು ತಿಳಿಸಿದರು. ಕಾನೂನು-ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಮೀಸಲು ಅರಣ್ಯ ಪ್ರದೇಶದಲ್ಲಿ ಸಚಿವ ಈ ರೀತಿ ಅತಿಕ್ರಮಣಕ್ಕೆ ಅವಕಾಶ ನೀಡಿದರೆ ಭವಿಷ್ಯದಲ್ಲಿ ಅರಣ್ಯ ಸಂಪೂರ್ಣ ನಾಶವಾಗುತ್ತದೆ. ದಿನನಿತ್ಯ ನಡೆಯುವ ಮಾನವ-ವನ್ಯಜೀವಿ ಸಂಘರ್ಷ ಮುಂದುವರಿಯುತ್ತದೆ. ಹೀಗಾಗಿ ಅಧಿಕಾರಿಗಳ ಅಮಾನತು ಸಾಧ್ಯವಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಶಾಸಕರು ಮತ್ತೆ ಪ್ರತಿಭಟನೆ ನಡೆಸಿದಾಗ ಸ್ಪೀಕರ್ ಯು.ಟಿ. ಖಾದರ್ ಅವರು ಶಾಸಕರ ಹಕ್ಕುಚ್ಯುತಿಯನ್ನು ಯಾರೂ ಸಹಿಸುವುದಿಲ್ಲ ಅರಣ್ಯ ಕಾಯ್ದೆ ಕಠಿಣವಾಗಿರುವುದರಿಂದಲೇ ಕಾಡು ಉಳಿದಿದೆ. ಇಲ್ಲವಾದರೆ ಮುಂದಿನ ಪೀಳಿಗೆಗೆ ಅರಣ್ಯ ಉಳಿಯುತ್ತಿರಲಿಲ್ಲ ಎಂದು ಹೇಳಿ ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಲು ಒಪ್ಪಿಗೆ ಸೂಚಿಸಿದರು. ಪ್ರಕರಣವನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಖಂಡ್ರೆ ಭರವಸೆ ನೀಡಿದ ಬಳಿಕ ಬಿಜೆಪಿ ಪ್ರತಿಭಟನೆ ವಾಪಸ್ ಪಡೆದುಕೊಂಡಿತು.

Related posts

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಪರವಾಗಿ ಕರ್ನಾಟಕದ ಬಂಧುಗಳೊಂದಿಗೆ ನಡೆದ ಕರ್ನಾಟಕ ಸಮಾಜ ಸಮ್ಮೇಳನದಲ್ಲಿ ಶಾಸಕ ಹರೀಶ್ ಪೂಂಜರವರಿಂದ ಮತಯಾಚನೆ, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಭಾಗಿ

Suddi Udaya

ಪಡ್ಡಂದಡ್ಕದಲ್ಲಿ ಶ್ರೀ ಮಂಜುನಾಥೇಶ್ವರ ಕುಣಿತ ಭಜನಾ ಮಂಡಳಿಗೆ ಚಾಲನೆ

Suddi Udaya

ಸೌತಡ್ಕ ದೇವಸ್ಥಾನದಲ್ಲಿ ಪುಷ್ಕರಣಿ ಕೆರೆ, ರಕ್ತೇಶ್ವರಿ ಗುಡಿ, ನಾಗಾಲಯಕ್ಕೆ ಶಿಲಾನ್ಯಾಸ

Suddi Udaya

ಮಹೇಶ್ ಶೆಟ್ಟಿ ತಿಮರೋಡಿಯವರಿಂದ ಜೈನ ಮತ್ತು ಹಿಂದೂ ಸಮುದಾಯಗಳ ನಡುವೆ ಅಶಾಂತಿಯನ್ನು ಪ್ರೇರೇಪಿಸುವ ಭಾಷಣ ಆರೋಪ: ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಉಜಿರೆಯ ಅಜಿತ್ ಹೆಗ್ಡೆಯವರಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ಬಂದಾರುವಿನಲ್ಲಿ ಸರಿಯಾಗಿ ಬಸ್ಸು ವ್ಯವಸ್ಥೆಯಿಲ್ಲದೆ ಪ್ರಯಾಣಿಕರ ಪರದಾಟ: ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರ ಮನವಿ

Suddi Udaya

ಬೆಳ್ತಂಗಡಿ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಶಾಖೆಯಲ್ಲಿ ವಿದ್ಯಾರ್ಥಿ ವೇತನ ವಿತರಣೆ

Suddi Udaya
error: Content is protected !!