ಬೆಳ್ತಂಗಡಿ: ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಪರಿಹಾರ ಆಗುವ ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಗ್ರಾಮ ಪಂಚಾಯಿತಿ ನೌಕರರ ಕುಂದು ಕೊರತೆ ಅದಾಲತ್ ಸಭೆ ನಡೆಸುವಂತೆ, ಡಾ. ಆನಂದ್ ಐ.ಎ.ಎಸ್. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇವರಿಗೆ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಡಾ.ದೇವಿಪ್ರಸಾದ್ ಬೊಲ್ಮ ಇವರು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿನ ಅನುಮೋದನೆಗೆ ಬಾಕಿ ಇರುವ ನೌಕರರಿಗೆ ಅನುಮೋದನೆ ಒದಗಿಸಬೇಕು. ಗ್ರಾಮ ಪಂಚಾಯಿತಿ ನೌಕರರಿಗೆ ವಿದ್ಯಾರ್ಹತೆ ಸಮಸ್ಯೆಯಿಂದ ಅನುಮೋದನಿಗೆ ಬಾಕಿ ಇರುವ ಪ್ರಕರಣಗಳನ್ನು ಪರಿಶೀಲಿಸಿ ಎಲ್ಲರಿಗೂ ಅನುಮೋದನೆ ನೀಡಬೇಕು. ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿನ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇರ ನೇಮಕಾತಿ ಮಾಡಿಕೊಳ್ಳದೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನೌಕರರಿಂದ ಆಯ್ಕೆ ಮಾಡಬೇಕು. ನಿವೃತ್ತಿಯಾದ ಎಲ್ಲಾ ನೌಕರರಿಗೆ ನಿವೃತ್ತಿ ಉಪಧನ ಮಂಜೂರು ಮಾಡಬೇಕು ಹಾಗೂ ನೌಕರರನ್ನು ಗೌರವಯುತವಾಗಿ ಬೀಳ್ಕೊಡಬೇಕು. ಮುಂಬಡ್ತಿ ಆಗಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ನೌಕರರಿಂದ ಬಡ್ತಿ ಮೂಲಕ ತುಂಬಿಕೊಳ್ಳಬೇಕು.
ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಖಾಲಿ ಇರುವ ಗ್ರೇಡ್-2 ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕ ಹುದ್ದೆಗಳಿಗೆ ಪಂಚಾಯತ್ ನೌಕರರಿಂದ ಮುಂಬಡ್ತಿ ನೀಡಬೇಕು. ಕನಿಷ್ಠ ವೇತನಕ್ಕಿಂತ ಹೆಚ್ಚಿಗೆ ಪಾವತಿಸುತ್ತಿರುವ ವೇತನವನ್ನು ಪಾವತಿಸುವಂತೆ ಸೂಕ್ತ ನಿರ್ದೇಶನ ನೀಡಬೇಕು. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಅನಂಕಂಪದ ಆಧಾರದ ನೇಮಕಾತಿಗಳು ಇದ್ದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಬಗ್ಗೆ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಧಿಕಾರಿ ಕುಸುಮಾಧರ, ಮಂಗಳೂರು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಮಹೇಶ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ. ಕಾರ್ಯದರ್ಶಿ ದಿನೇಶ್ ಎಂ. ಹಾಗೂ ನೌಕರರು ಉಪಸ್ಥಿತರಿದ್ದರು.