ಮೊಗ್ರು: ಯುವ ಕೃಷಿಕ ದೇವಿಪ್ರಸಾದ್ ಗೌಡ ಕಡಮ್ಮಾಜೆ ರವರಿಗೆ “ಉತ್ತಮ ಅಡಿಕೆ ಕೃಷಿಕ ಪ್ರಶಸ್ತಿ”

Suddi Udaya

ಬೆಳ್ತಂಗಡಿ: ಭಾರತೀಯ ಪ್ಲಾಂಟೇಶನ್ ಬೆಳೆಗಳ ಸೊಸೈಟಿ ನೀಡುವ ಉತ್ತಮ ಅಡಿಕೆ ಕೃಷಿಕ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಬಂದಾರು ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ಯುವ ಕೃಷಿಕ ದೇವಿಪ್ರಸಾದ್ ಗೌಡ ಕಡಮ್ಮಾಜೆ ಭಾಜನರಾಗಿದ್ದಾರೆ. ತಮ್ಮ ಕಡಮ್ಮಾಜೆ ಫಾರ್ಮ್ಸ್ ನಲ್ಲಿ ಅಡಿಕೆಯೊಂದಿಗೆ ಮಿಶ್ರಬೆಳೆಯಾಗಿ ಕಾಳುಮೆಣಸು ಮತ್ತು ಬಾಳೆ ಬೆಳೆಯುತ್ತಿರುವ ಇವರು, ಮಿಶ್ರ ಕೃಷಿಯಾಗಿ ದನ ಸಾಕಣೆ, ಕೋಳಿ ಸಾಕಣೆ, ಕುರಿ ಸಾಕಣೆ ಮತ್ತು ಹಂದಿ ಸಾಕಣೆಯನ್ನು ವಾಣಿಜ್ಯ ಮಟ್ಟದಲ್ಲಿ ಮಾಡುತ್ತಿದ್ದು, ಯುವ ಕೃಷಿಕರಿಗೆ ಪ್ರೇರಣೆಯಾಗಿದ್ದಾರೆ.

ಸಂಪೂರ್ಣ ಸಾವಯವ ಕೃಷಿಕರಾಗಿರುವ ಕಡಮ್ಮಾಜೆ ಫಾರ್ಮ್ಸ್ ನ ದೇವಿಪ್ರಸಾದ್, ಕಾಂಪೋಸ್ಟ್ ಮತ್ತು ಎರೆಗೊಬ್ಬರ ತಯಾರಿಕೆ ಮಾತ್ರವಲ್ಲದೆ, ಉಪ್ಪಿನಂಗಡಿ ಪೇಟೆಯ ಹಸಿ ತ್ಯಾಜ್ಯವನ್ನು ಬೇರ್ಪಡಿಸಿ ಕಾಂಪೋಸ್ಟ್ ಮಾಡಿ ಬೆಳೆಗಳಿಗೆ ನೀಡುತ್ತಿದ್ದಾರೆ. ಬಲೂನ್ ರೂಪದ ಎರಡು ಗೋಬರ್ ಅನಿಲ ಘಟಕಗಳಿದ್ದು, ಗೊಬ್ಬರ ಸ್ವಾವಲಂಬನೆ ಜೊತೆಗೆ ಇಂಧನ ಸ್ವಾವಲಂಬನೆಯನ್ನೂ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಸಾವಯವ ಕೃಷಿ ಮತ್ತು ಗೊಬ್ಬರದ ಸ್ವಾವಲಂಬನೆಗೆ ಉತ್ತೇಜನ ನೀಡುತ್ತಿರುವ ಈ ಸಮಯದಲ್ಲಿ, ಸಣ್ಣ ವಯಸ್ಸಿನಲ್ಲೇ ಕೃಷಿಯಲ್ಲಿ ಸಾಧನೆಯನ್ನು ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕನನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷ.

ಉತ್ತಮ ಅಡಿಕೆ ಕೃಷಿಕ ಪ್ರಶಸ್ತಿಯನ್ನು ಡಿಸೆಂಬರ್ 13ರಂದು ಆಂಧ್ರಪ್ರದೇಶದ ಪೆದವೆಗಿಯಲ್ಲಿರುವ ಭಾರತೀಯ ತಾಳೆ ಸಂಶೋಧನಾ ಕೇಂದ್ರದಲ್ಲಿ ನಡೆದ ಭಾರತೀಯ ಪ್ಲಾಂಟೇಶನ್ ಬೆಳೆಗಳ ಸೊಸೈಟಿಯ 50ನೇ ವಾರ್ಷಿಕ ಸಭೆಯಲ್ಲಿ ದೇವಿಪ್ರಸಾದ್ ಗೌಡ ಕಡಮ್ಮಾಜೆಯವರಿಗೆ ನೀಡಲಾಯಿತು. ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಅಡಿಕೆ ಕೃಷಿಕನನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರತೀ ವರ್ಷ ನೀಡಲಾಗುತ್ತಿದೆ. ಇದು ಅಖಿಲ ಭಾರತ ಅಡಿಕೆ ಒಕ್ಕೂಟ ಟ್ರಸ್ಟ್, ಭಾರತೀಯ ಪ್ಲಾಂಟೇಶನ್ ಬೆಳೆಗಳ ಸೊಸೈಟಿ ಮುಖೇನ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.

Leave a Comment

error: Content is protected !!