ಶಿರ್ಲಾಲು: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಡಿ.24ರಿಂದ ಡಿ.28ರವರಗೆ ವಿವಿಧ ವೈದಿಕ, ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಡಿ.24ರಂದು ಮಧ್ಯಾಹ್ನ ಕುಣಿತ ಭಜನೆ, ಕೀಳು ಕುದುರೆ, ಚೆಂಡೆ ವಾದ್ಯ, ವಿವಿಧ ವೇಷ ಭೂಷಣಗಳೊಂದಿಗೆ ವೈಭವಯುತ ಅಭೂತಪೂರ್ವ ಹಸಿರುವಾಣಿ ಹೊರೆಕಾಣಿಕೆ ಮತ್ತು ದೈವ-ದೇವರ ಆಭರಣಗಳ ವೈಭವಯುತ ಮೆರವಣಿಗೆಯು ಶಿರ್ಲಾಲು ಬ್ರಹ್ಮ ಬೈದರ್ಕಳ ಗರಡಿ ಬಳಿಯಿಂದ ಕ್ಷೇತ್ರಕ್ಕೆ ನಡೆಯಲಿದೆ.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಹರೀಶ್ ಪೂಂಜರ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನೆಯನ್ನು ಉದ್ಯಮಿ ಬಸವನ ಗೌಡ ರಾಯಚೂರು ನೆರವೇರಿಸಲಿದ್ದಾರೆ. ಉಗ್ರಾಣದ ದೀಪ ಪ್ರಜ್ವಲನೆಯನ್ನು ಜನಜಾಗೃತಿ ವೇದಿಕೆಯ ಸ್ತಾಪಕಾಧ್ಯಕ್ಷ ವಸಂತ ಸಾಲ್ಯಾನ್ ಕಾಪಿನಡ್ಕ ನೆರವೇರಿಸಲಿದ್ದಾರೆ. ಸಂಜೆ 6.30ಕ್ಕೆ ದೇವರ ಆಭರಣ ಸಮರ್ಪಣೆ ನಂತರ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್‌ಸಿಂಹ ನಾಯಕ್ ಅಧ್ಯಕ್ಷತೆ ವಹಿಸಲಿದ್ದು, ಉದ್ಘಾಟನೆಯನ್ನು ಉದ್ಯಮಿ ಸುರೇಶ್ ಪೂಜಾರಿ ಊರ ಮುಂಬೈ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಎಂ ಪಾರೆಂಕಿ ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ ಗಂಟೆ 6.00ರಿಂದ ಮನಿಲಬೈಲು ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ಚಿಣ್ಣರ ಚಿಲಿಪಿಲಿ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ, ಸುಲ್ಕೇರಿ ಶ್ರೀರಾಮ ಶಾಲಾ ವಿದ್ಯಾರ್ಥಿಗಳಿಂದ ತುಳುನಾಡ ವೈಭವ ಮತ್ತು ನೃತ್ಯ ಸಿಂಚನ ವಿನೋದಾವಳಿಗಳು, ಕಾರ್ಕಳ ಗುಂಡಾಜೆ ಸೂರಾಲು ಹವ್ಯಾಸಿ ಕಲಾವಿದರಿಂದ ತುಳು ಭಕ್ತಿ ಪ್ರಧಾನ ಸಾಮಾಜಿಕ ನಾಟಕ “ಬಾಕಿಲ್ ದೆಪ್ಪುಲೆ” ಪ್ರದರ್ಶನಗೊಳ್ಳಲಿದೆ.