ಉಜಿರೆ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿಬ್ಬಂದಿಗಳ ಶ್ರೇಯೋಭಿವೃದ್ಧಿಗಾಗಿ ರಚನೆಯಾಗಿರುವ ‘ಸಿರಿ ಕ್ಲಬ್’ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವು ಜ.2 ರಂದು ಉಜಿರೆಯಲ್ಲಿರುವ ಸಿರಿ ಕೇಂದ್ರ ಕಛೇರಿಯಲ್ಲಿ ಜರುಗಿತು.
ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಯು.ಶರತ್ ಕೃಷ್ಣ ಪಡ್ವೆಟ್ನಾಯರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಒಂದು ಇಂಜಿನ್ ಸಮರ್ಪಕವಾಗಿ ನಡೆಯಲು ಇಂಧನ ಹೇಗೆ ಮುಖ್ಯವೋ ಅದೇ ರೀತಿ ಒಂದು ಸಂಸ್ಥೆಯು ಯಶಸ್ವಿಯಾಗಿ ನಡೆಯಲು ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಶ್ರಮವೂ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಪೂಜ್ಯ ಖಾವಂದರು ಯಾವುದೇ ಲಾಭದ ಉದ್ದೇಶವಿಲ್ಲದೆ ಸ್ತ್ರೀ ಸಬಲೀಕರಣದ ಧ್ಯೇಯೋದ್ದೇಶದಿಂದ ಕಟ್ಟಿ ಬೆಳೆಸುತ್ತಿರುವ ಈ ಸಿರಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳ ಹಿತದೃಷ್ಟಿಯಿಂದ ಈ ‘ಸಿರಿ ಕ್ಲಬ್’ ಬಳಗವನ್ನು ಕಟ್ಟಿಕೊಂಡಿದ್ದೀರಿ. ಇದು ನಿಜವಾಗಿಯೂ ಬಹಳ ಒಳ್ಳೆಯ ಚಿಂತನೆಯಾಗಿದ್ದು, ಇದಕ್ಕೆ ಸದಾ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಅಭಿನಂದನೆಯನ್ನು ಸಲ್ಲಿಸುತ್ತಾ, ಎಲ್ಲಾ ಸಿರಿ ಸಿಬ್ಬಂದಿಗಳಿಗೆ ಹೊಸ ವರ್ಷದ ಶುಭಾಶಯವನ್ನು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ಜನಾರ್ಧನರವರು ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ವರ್ಷದ ಸಂಭ್ರಮೋಪಾದಿಯಲ್ಲಿ ಸಿರಿ ಸಂಸ್ಥೆಗೆ ಆಗಮಿಸಿ ಎಲ್ಲಾ ಸಿರಿ ಸಿಬ್ಬಂದಿಗಳಿಗೂ ಶುಭವನ್ನು ಹಾರೈಸಿದ ಯು.ಶರತ್ ಕೃಷ್ಣ ಪಡ್ವೆಟ್ನಾಯರವರಿಗೆ ಗೌರವಾರ್ಪಣೆ ಸಲ್ಲಿಸಿದರು.
ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ, ಸಿರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ರಾಜೇಶ್ ಪೈ, ಖ್ಯಾತ ಉದ್ಯಮಿ ಹಾಗೂ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ನ ಮಾಲಕರಾದ ಮೋಹನ್ ಕುಮಾರ್ ರವರು ಸಿರಿ ಸಿಬ್ಬಂದಿಗಳಿಗೆ ಹೊಸ ವರ್ಷದ ಶುಭಾಶಯವನ್ನು ಕೋರಿ, ಹೊಸ ವರ್ಷದ ಆರಂಭದಲ್ಲಿ ಒಳ್ಳೆಯ ಚಿಂತೆನೆಯೊಂದಿಗೆ, ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಸಿಬ್ಬಂದಿಗಳೂ ಒಟ್ಟಾಗಿ ಶ್ರಮವಹಿಸಿ ದುಡಿದು ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಹಕರಿಸುವಂತೆ ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ನೆರೆದಿರುವಂತಹ ಅತಿಥಿ ಗಣ್ಯರ ಸಮ್ಮುಖದಲ್ಲಿ ಎಲ್ಲಾ ಸಿರಿ ಸಿಬ್ಬಂದಿಗಳು ಹೊಸ ವರ್ಷವನ್ನು ಆಚರಿಸುವ ಮೂಲಕ ಸಂಭ್ರಮಪಟ್ಟರು.
ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರಸನ್ನ ಸ್ವಾಗತಿಸಿ, ಗೋದಾಮು ಪ್ರಬಂಧಕರಾದ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸಿರಿ ಅಗರಬತ್ತಿ ಘಟಕದ ಮೇಲ್ವಿಚಾರಕರಾದ ಸತೀಶ್ ರವರು ಧನ್ಯವಾದವಿತ್ತರು.