ನೆರಿಯ ಗ್ರಾಮದ ಕುಲೆನಾಡಿ ಎಂಬಲ್ಲಿ ಕಡವೆ ಬೇಟೆಯಾಡಿ ಮಾಂಸ ಮಾಡಿದ ಆರೋಪದ ಮೇಲೆ ಸ್ಥಳೀಯ ಅಶೋಕ್ ಕುಮಾರ್(59) ಎಂಬ ವ್ಯಕ್ತಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದು,ಬೇಟೆಗೆ ಬಳಸಿದ ಬಂದೂಕು ಹಾಗೂ 5 ಕೆಜಿ ಮಾಂಸ ಹಾಗೂ ಬೇಟೆಗೆ ಸಂಬಂಧಿಸಿದ ಇತರ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡು ಕೇಸು ದಾಖಲಿಸಿದೆ. ಆರೋಪಿಯ ಮನೆಯಿಂದ ನಾಲ್ಕು ಕಿಮೀ ದೂರದಲ್ಲಿರುವ ಚಾರ್ಮಾಡಿ-ಕನಪಾಡಿ ಮೀಸಲು ಅರಣ್ಯ ಪ್ರದೇಶದ ಪೆರ್ನಾಳೆ ಕೆರೆಯಿಂದ ಒಂದಿಷ್ಟು ದೂರದಲ್ಲಿ ಅಶೋಕ್ ಕುಮಾರ್ ಹಾಗೂ ಇತರರು ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿರುವ ಬಗ್ಗೆ ಶಂಕೆ ಇದ್ದು, ಸ್ಥಳದಲ್ಲಿ ಚರ್ಮ, ತಲೆಯ ಹಾಗೂ ಕಾಲಿನ ಭಾಗಗಳು ಮತ್ತು ಇನ್ನಿತರ ಅವಯವಗಳು ಪತ್ತೆಯಾಗಿವೆ. ಬೇಟೆಯಾಡಿದ ತಂಡದಲ್ಲಿ ಇತರರು ಇರುವ ಅನುಮಾನ ವ್ಯಕ್ತವಾಗಿದ್ದು ತನಿಖೆ ಮುಂದುವರೆದಿದೆ.
ಆರ್ ಎಫ್ ಒ ಬಿ.ಜಿ.ಮೋಹನ್ ಕುಮಾರ್ ನೇತೃತ್ವದಲ್ಲಿ ಡಿಆರ್ ಎಫ್ ಒ ಗಳಾದ ಯತೀಂದ್ರ,ಹರಿಪ್ರಸಾದ್, ಭವಾನಿ ಶಂಕರ್, ರಾಘವೇಂದ್ರ, ಪಾಂಡುರಂಗ ಕಮತಿ, ಬಾಲಕೃಷ್ಣ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.