ಅಯೋಧ್ಯೆಯಲ್ಲಿನ ಶ್ರೀ ರಾಮನ ಮಂದಿರವು ಸುಂದರವಾಗಿ ಮೂಡಿಬಂದಿದೆ: ಡಾ| ಡಿ ವೀರೇಂದ್ರ ಹೆಗ್ಗಡೆ

Suddi Udaya

ಅಯೋಧ್ಯೆಯಲ್ಲಿನ ಶ್ರೀ ರಾಮನ ಮಂದಿರವು ಸುಂದರವಾಗಿ ಮೂಡಿಬಂದಿದೆ. ಮಂದಿರದೊಳಗಿನ ಶ್ರೀ ರಾಮನ ಬಿಂಬದ ಪ್ರಾಣಪ್ರತಿಷ್ಠೆಯು ಸೂಕ್ತ ರೀತಿಯಲ್ಲಿ ಜರುಗಿತು. ಪ್ರತಿಷ್ಟಿತ ಮಠಾಧಿಪತಿಗಳು ಮತ್ತು ಎಲ್ಲಾ ರಂಗದ ಪ್ರಮುಖರು ಈ ಐತಿಹಾಸಿಕ ಕಾರ್‍ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವು ಅತ್ಯಂತ ಶಿಸ್ತಿನಿಂದ ನಡೆದಿದೆ.

ಅಯೋಧ್ಯೆಯ ನಗರವನ್ನು ಹೂವಿನಿಂದ ಶೃಂಗಾರಗೊಳಿಸಿದ್ದರು. ಅಲ್ಲಲ್ಲಿ ಸ್ವಾಗತ ನೃತ್ಯವು ನಡೆಯುತ್ತಿದ್ದವು. ಎಲ್ಲಾ ರೀತಿಯಿಂದಲೂ ಕಾರ್ಯಕ್ರಮವು ವ್ಯವಸ್ಥಿತವಾಗಿಯೇ ನಡೆಯಿತು.
ರಾಮಮಂದಿರದ ಎದುರುಗಡೆ ಕುಳಿತ ಎಲ್ಲಾ ಸಂತರಿಗೂ ಅಲ್ಲಿಯೇ ಆಹಾರ, ಪಾನೀಯಗಳನ್ನು ವಿತರಿಸಿದರು. ಅಲ್ಲಿಯ ಹವಾಮಾನದಲ್ಲಿ ಚೆನ್ನಾಗಿ ಚಳಿಯೇ ಇತ್ತು, ಆದರೂ ಆತ್ಮೀಯವಾದ ಸ್ವಾಗತ ಮತ್ತು ವ್ಯವಸ್ಥಿತವಾದ ಕಾರ್ಯಕ್ರಮದಿಂದಾಗಿ ನಮಗೆಲ್ಲರಿಗೂ ಅಷ್ಟು ಸಮಸ್ಯೆಯೇ ಎನಿಸಲಿಲ್ಲ. ಹೊರಗಡೆ ಕುಳಿತವರಿಗೆ ಟಿ.ವಿ. ಪರದೆಯ ಮುಖಾಂತರ ಒಳಗೆ ನಡೆಯುವ ಪೂಜಾ ವಿಧಿ-ವಿಧಾನಗಳನ್ನು ತೋರಿಸುತ್ತಿದ್ದರು.

ಈ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಿಂದಾಗಿ ಮಹಾತ್ಮರೆಲ್ಲರೂ ಪ್ರಸನ್ನರಾಗಿ ಹೋದರು. ಇಂದು ಈ ಕಾರ್ಯಕ್ರಮದಿಂದಾಗಿ ಅಲ್ಲಲ್ಲಿ ಪ್ರಯಾಣಕ್ಕೆ ಅಡೆತಡೆಗಳಿದ್ದವು. ಇಂದಿನಿಂದ ಮಂದಿರಕ್ಕೆ ಮುಕ್ತ ದರ್ಶನ ಎಂದು ಘೋಷಿಸಲಾಗಿದೆ.


ಗೌರವಾನ್ವಿತ ಪ್ರಧಾನಮಂತ್ರಿಯವರಾದ ನರೇಂದ್ರ ಮೋದಿಜೀಯವರು ಎಲ್ಲರನ್ನೂ ಉದ್ಧೇಶಿಸಿ ಮಾತನಾಡಿದರು ಹಾಗೂ ಎಲ್ಲಾ ಸಂತರ ಬಳಿ ಬಂದು ಗೌರವದಿಂದ ಮಾತನಾಡಿಸಿದರು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯವನ್ನು ತಿಳಿಸಿದರು.

Leave a Comment

error: Content is protected !!