ಬೆಳ್ತಂಗಡಿ: ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆಯು ಸೋಮವಾರ ನಸುಕಿನ ವೇಳೆ ಸಂಪನ್ನಗೊಂಡಿತು. ಕ್ಷೇತ್ರದಲ್ಲಿ ಜ. 28ರಂದು ರಾತ್ರಿ ನಡೆದ ಸಿರಿಗಳ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಭಕ್ತಿಪರವಶರಾದರು.
ಜ.29ರಂದು ಸಂಪ್ರೋಕ್ಷಣೆ, ಕಲಶಾಭಿಷೇಕ, ಮಂತ್ರಾಕ್ಷತೆ, ಮಂಗಲ ಪ್ರಸಾದ ವಿತರಣೆಯೊಂದಿಗೆ ಜಾತ್ರೋತ್ಸವಕ್ಕೆ ತೆರೆಬಿತ್ತು. ಜ.28ರಂದು ಕವಾಟ ಉದ್ಘಾಟನೆ, ಕಲಶಾಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ಚೂರ್ಣೋತ್ಸವ, ದರ್ಶನ ಬಲಿ , ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಪಲ್ಲ ಪೂಜೆ, ಸಂಜೆ ಯಾತ್ರಾ ಹೋಮ, ರಾತ್ರಿ ಕುಣಿತ ಭಜನಾ ಕಾರ್ಯಕ್ರಮ, ಬಲಿ ಉತ್ಸವ, ಸಿರಿಗಳ ಜಾತ್ರೆ, ಕುಮಾರ ದರ್ಶನ, ಕೊಡಮಣಿತ್ತಾಯ ದೈವದ ನೇಮೋತ್ಸವ, ದೈವದೇವರ ಭೇಟಿ, ಅವಭೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ ನಡೆಯಿತು.
ಜ.27ರಂದು ಆಶ್ಲೇಷ ಬಲಿ, ಸಾಮೂಹಿಕ ಶ್ರಿ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಉತ್ಸವ ಬಲಿ, ಮಹಾಪೂಜೆ, ಶ್ರೀ ಭೂತ ಬಲಿ, ಕವಾಟ ಬಂಧನ, ಪಟ್ಟದ ಪಂಜುರ್ಲಿ ಮತ್ತು ಕಲ್ಕುಡ ದೈವಗಳ ಕೋಲ ನೇಮೋತ್ಸವ ಜರುಗಿತು.
ಜ.26ರಂದು ದೇವತಾ ಪ್ರಾರ್ಥನೆ, ತೋರಣ ಮೂಹೂರ್ತ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಧ್ವಜಾರೋಹಣ , ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಕುಣಿತ ಭಜನೆ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವ್ಯಾಘ್ರಚಾಮುಂಡಿ ಸಹಿತ ರಕ್ತೇಶ್ವರಿ, ಮೈಸಂದಾಯ ದೈವಗಳಿಗೆ ಗಗ್ಗರ ಸೇವೆ ನಡೆಯಿತು.ಜ.25ರಂದು ವಾಸ್ತು ರಾಕ್ಷೋಘ್ನ ಹೋಮ, ಪ್ರಾಕಾರ ಬಲಿ, ನಿತ್ಯಪೂಜೆ ನಡೆಯಿತು.
ಕ್ಷೇತ್ರದ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್, ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಆಡಳಿತ ಮಂಡಳಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.