ಬೆಂಗಳೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ‘ನಮ್ಮ ಶಾಲೆ, ನಮ್ಮ ಜವಾಬ್ದಾರಿ’ ಎಂಬ ಕಾರ್ಯಕ್ರಮದಡಿ ಮಾ.31ರೊಳಗೆ ಶಾಲಾ ಹಳೇ ವಿದ್ಯಾರ್ಥಿಗಳ ಸಂಘ ರಚಿಸುವಂತೆ ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.
ರಾಜ್ಯದ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಶಾಲೆಗಳನ್ನು ಬಲವರ್ಧನೆಗೊಳಿಸುವ ಉದ್ದೇಶದಿಂದ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿದೆ. ಇದರ ಜತೆಗೆ ವೈಯಕ್ತಿಕ, ಸಾಮೂಹಿಕ ಬೆಂಬಲ ಮತ್ತು ಸಂಪನ್ಮೂಲಗಳು ದೊರಕಿಸಿದರೆ, ಸರ್ಕಾರಿ ಶಾಲೆಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಶಾಲೆ, ನಮ್ಮ ಜವಾಬ್ದಾರಿ ಕಾರ್ಯಕ್ರಮ. ರೂಪಿಸಿದೆ. ಶಾಲೆಗಳಲ್ಲಿ ಈ ಹಿಂದೆ ವ್ಯಾಸಂಗ ಮಾಡಿರುವ ಹಳೇ ವಿದ್ಯಾರ್ಥಿಗಳನ್ನು ಗುರುತಿಸಿ ಶಾಲೆಯ ಪಾರಂಪರಿಕ ಹಿನ್ನೆಲೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯಲು ಸರ್ಕಾರಿ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಮಾ.31ರೊಳಗೆ ರಚಿಸಲು ನಿರ್ದೇಶನ ನೀಡಿದೆ.
ಈ ಮೂಲಕ ಶಾಲೆಗೆ ಅಗತ್ಯವಿರುವ ಗ್ರಂಥಾಲಯ, ಪ್ರಯೋಗಾಲಯ, ಪೀಠೋಪಕರಣ, ಸ್ಮಾರ್ಟ್ ಕ್ಲಾಸ್, ಇ-ಕಲಿಕಾ ಕೇಂದ್ರ ಸ್ಥಾಪನೆಯಂತಹ ಸೌಲಭ್ಯಗಳ ಪೂರೈಕೆ ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು ಹಳೇ ವಿದ್ಯಾರ್ಥಿಗಳಿಂದ ಪೂರೈಸಿಕೊಳ್ಳುವಂತೆ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ.