ವೇಣೂರು ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಹಿನ್ನಲೆಯಲ್ಲಿ ನಿರಂಜನ ಲಹರಿಯ ಮೂಲಕ ಫೆ 06 ರ ಮಂಗಳವಾರ ಆನ್ಲೈನ್ ಮಾಧ್ಯಮದ ಮೂಲಕ ಸರ್ವಧರ್ಮಗಳಲ್ಲಿ ತ್ಯಾಗದ ಪರಿಕಲ್ಪನೆ ಎಂಬ ವಿಚಾರವಾಗಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪರಮ ಪೂಜ್ಯ ಸ್ವಸ್ತಿಶ್ರೀ ಭಾರತ ಭೂಷಣ ಡಾ. ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಮಾತನಾಡುತ್ತ ಸರ್ವ ಧರ್ಮಗಳು ತ್ಯಾಗವನ್ನು ಪ್ರತಿಪಾದಿಸಿವೆ. ಸರ್ವ ಧರ್ಮಗಳೊಡನೆ ಉತ್ತಮ ನಾಗರಿಕತೆಯೊಂದಿಗೆ, ಸಹಿಷ್ಣುತೆಯೊಂದಿಗೆ , ಸಮನ್ವಯದಿಂದ ಬದುಕಿ ಸ್ವಾರ್ಥವನ್ನು ಮಾಡದೇ ಇರುವುದೇ ತ್ಯಾಗವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪವರ್ ಟಿ ವಿ ಮುಖ್ಯಸ್ಥರಾದ ರಾಕೇಶ್ ಶೆಟ್ಟಿಯವರು ಮಾತನಾಡಿ ಭಗವಾನ್ ಬಾಹುಬಲಿ ವಿಗ್ರಹದ ಎದುರು ನಿಂತಾಗಲೇ ಬಹು ದೊಡ್ಡ ತ್ಯಾಗದ ಅರಿವಾಗುತ್ತದೆ. ಮಕ್ಕಳಿಗಾಗಿ ದೊಡ್ಡವರು ಮೊಬೈಲ್ ತ್ಯಾಗ ಮಾಡಿ ಅವರಿಗಾಗಿ ಪರಿಸ್ಪಂದಿಸುವುದು ಈ ಆಧುನಿಕ ಕಾಲದಲ್ಲಿ ಬಹು ದೊಡ್ಡ ತ್ಯಾಗವಾಗಿದೆ.
ಹಿಂದೂ ಧರ್ಮದ ಪರವಾಗಿ ಹಿಂದೂ ಧರ್ಮದ ವಿದ್ವಾಂಸರು , ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ವಿನಾಯಕ ಭಟ್ಟ್ ಮೂಡುಬಿದಿರೆ ಇವರು ಹಿಂದೂ ಧರ್ಮದಲ್ಲಿ ತ್ಯಾಗಧರ್ಮ ಎಂಬ ವಿಚಾರದಲ್ಲಿ ಮಾತನಾಡುತ್ತ ನನ್ನದಾಗಿರುವ ವಸ್ತುಗಳನ್ನು ನನ್ನದಲ್ಲ ಎನ್ನುವ ಉದಾತ್ತ ಭಾವನೆ ಹೊಂದುವುದೇ ತ್ಯಾಗ ಧರ್ಮವಾಗಿದೆ. ಈ ಭಾವನೆ ಬರಬೇಕಾದರೆ ನಮ್ಮನ್ನು ನಾವು ಶುದ್ಧೀಕರಿಸಬೇಕೆಂದರು.
ಇಸ್ಲಾಂ ಧರ್ಮದಲ್ಲಿ ತ್ಯಾಗ ಧರ್ಮ ಎಂಬ ವಿಚಾರದ ಮೇಲೆ ಪತ್ರಕರ್ತರಾದ ಅಶ್ರಫ್ ಆಲಿಕುಂಞ ಮುಂಡಾಜೆ ಇವರು ಮಾತನಾಡುತ್ತಾ ಸುಖಭೋಗಗಳಿಗೆ ಮಾರುಹೋಗದೇ ಸರಳ ಜೀವನ ನಡೆಸುವುದು ಹಾಗೂ ದೇವರ ಪ್ರೀತಿಯನ್ನು ಗಳಿಸಿಕೊಳ್ಳುವುದೇ ತ್ಯಾಗವಾಗಿದೆ ಎಂದರು.
ಕ್ರೈಸ್ತ ಧರ್ಮದಲ್ಲಿ ತ್ಯಾಗದ ಪರಿಕಲ್ಪನೆ ಎಂಬ ವಿಚಾರದ ಮೇಲೆ ಸಂತ ಅಂತೋಣಿ ಕಾಲೇಜು ನಾರಾವಿ ಇದರ ಪ್ರಾಂಶುಪಾಲ ರೆವರೆಂಡ್ ಡಾ. ಅಲ್ವಿನ್ ಸೆರಾವೋ ಮಾತನಾಡುತ್ತ ತ್ಯಾಗವು ಪ್ರೀತಿಯ ಸಂಕೇತ , ತ್ಯಾಗವಿಲ್ಲದೇ ಪ್ರೀತಿ ಅಸಾಧ್ಯ , ಹಾಗೂ ಇನ್ನೊಬ್ಬರಿಗಾಗಿ ಬದುಕುವುದೇ ತ್ಯಾಗವಾಗಿದೆ.
ಜೈನ ಧರ್ಮದಲ್ಲಿ ತ್ಯಾಗದ ಪರಿಕಲ್ಪನೆ ಎಂಬ ವಿಚಾರದ ಮೇಲೆ ಖ್ಯಾತ ಸಾಹಿತಿ ನೇಮಿಚಂದ್ರ ಮಲ್ಲಪ್ಪ ದಿಬ್ಬದ ಇವರು ಮಾತನಾಡುತ್ತಾ ತೀರ್ಥಂಕರರು , ಮುನಿಗಳು ಉತ್ಕೃಷ್ಟ ತ್ಯಾಗದ ಧಾರಕರಾಗಿದ್ದಾರೆ. ತ್ಯಾಗ ಪೂರ್ವಕ ಜೀವನವು ಪರ ಜೀವಿಗಳ ಉನ್ನತೀಕರಕ್ಕೆ ಕಾರಣವಾದರೆ ಅದು ಅತೀ ಮಹತ್ವದ ತ್ಯಾಗವಾಗಿರುತ್ತದೆ ಎಂದರು.
ಕಾರ್ಯಕ್ರಮದ ಆಯೋಜಕರಾದ ನಿರಂಜನ್ ಜೈನ್ ಕುದ್ಯಾಡಿ ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳಲ್ಲಿ ಈ ಕಾರ್ಯಕ್ರಮವು ವೇಣೂರಿನ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಹಿನ್ನಲೆಯಲ್ಲಿ ಆಯೋಜಿಸಲಾಗಿದೆ ಎಂದರು. ಸರ್ವಧರ್ಮಗಳಲ್ಲಿ ಸಾಮರಸ್ಯದ ಅಗತ್ಯತೆ ಇದೆ ಎಂದರು. ಖ್ಯಾತ ಸಮಾಜ ಸೇವಕ ಮಾಳ ಹರ್ಷೇಂದ್ರ ಜೈನ್ ಸಹಕಾರ ನೀಡಿ ಶುಭ ಹಾರೈಸಿದರು. ಬೆಳ್ತಂಗಡಿಯ ಖ್ಯಾತ ಕಾರ್ಯಕ್ರಮ ನಿರೂಪಕರಾದ ಶಿಕ್ಷಕ ಧರಣೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಧೀರಜ್ ಜೈನ್ ಹೊಳೆನರಸೀಪುರ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವು ನಿರಂಜನ ಲಹರಿ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರಗೊಂಡಿತು.
– ನಿರಂಜನ್ ಜೈನ್ ಕುದ್ಯಾಡಿ