April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹಾದಿಬೀದಿಯಲ್ಲಿ ಭಿಕ್ಷೆ ಬೇಡಿ ಕಾಲ ಕಳೆಯುತ್ತಿದ್ದ ವಯೋವೃದ್ಧೆ: ಅನಾಥೆಯಾದ ಅಜ್ಜಿಗೆ ಆಸರೆಯಾದ ಹೋಟೆಲ್ ಮಾಲಕ ರಮೇಶ್ ಕೋಟ್ಯಾನ್

ಬೆಳ್ತಂಗಡಿ: ಅದ್ಯಾವೊದೋ ಕಾರಣದಿಂದ ಕೆಲ ಮಂದಿ ವೃದ್ಧರು ಮನೆ ಬಿಟ್ಟು ಬೀದಿ ಪಾಲಾಗಿರುತ್ತಾರೆ. ಕೆಲವೆಡೆ ಮಕ್ಕಳೇ ಯಾವುದೋ ಕಾರಣಕ್ಕೆ ವೃದ್ಧ ತಂದೆ, ತಾಯಿಯನ್ನು ಬೀದಿಗೆ ತಳ್ಳಿದರೆ, ಇನ್ನು ಕೆಲವಡೆ ತಂದೆ, ತಾಯಿಯೇ ಮಕ್ಕಳ ಮೇಲೆ ಮುನಿಸಿಕೊಂಡು ಬೀದಿಗೆ ಬರುತ್ತಾರೆ. ಇಲ್ಲೊಬ್ಬರು ವೃದ್ಧೆ ತನ್ನ ಗಂಡ, ಮಗನನ್ನು ಕಳೆದುಕೊಂಡು ದಿಕ್ಕುದೆಸೆಯಿಲ್ಲದೆ ಕಳೆದ ಹತ್ತು ವರ್ಷಗಳಿಂದ ಅನಾಥವಾಗಿ ಊರೂರು ಅಲೆಯುತ್ತಾ ಹಾದಿಬೀದಿಯಲ್ಲಿ ಭಿಕ್ಷೆ ಬೇಡಿ ಕಾಲ ಕಳೆಯುತ್ತಿದ್ದು, ಈಗ ಅಸೌಖ್ಯಕ್ಕೆ ಒಳಗಾಗಿ ನಡೆಯಲಾಗದೆ ಅನಾಥರಾದ ಅವರ ಸ್ಥಿತಿಯನ್ನು ನೋಡಿದ ಲಾಯಿಲದ ಹೋಟೆಲ್ ಮಾಲಕರೋರ್ವರು ಅಜ್ಜಿಗೆ ಆಸರೆಯಾಗಿ ನಿಂತು, ತನ್ನ ಮನೆಯಲ್ಲಿರಿಸಿಕೊಂಡು, ಅವರಿಗೆ ಚಿಕಿತ್ಸೆ ಕೊಡಿಸಿ, ಮಾನವೀಯತೆ ಮೆರೆದಿದ್ದಾರೆ.


ಲಾಯಿಲ ಗ್ರಾಮದ ಲಾಯಿಲ ಕ್ರಾಸ್ ವೆಂಕಟರಮಣ ದೇವಸ್ಥಾನದ ಎದುರು ಸತ್ಯಶ್ರೀ ಎಂಬ ಕ್ಯಾಂಟೀನನ್ನು ನಡೆಸುತ್ತಿರುವ ರಮೇಶ್ ಕೋಟ್ಯಾನ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಗೀತಾ ಅವರು ಈ ಅನಾಥೆಯಾಗಿರುವ ವೃದ್ಧೆಗೆ ಆಶ್ರಯೆಯಾಗಿದ್ದು, ನಡೆದಾಡಲು ಸಾಧ್ಯವಿಲ್ಲದ ಈ ಅಜ್ಜಿಯ ಪಾಲನೆ-ಪೋಷಣೆ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.


ಈ ವೃದ್ಧೆಯ ಹೆಸರು ಶಾರದಮ್ಮ ಪ್ರಾಯ ಸುಮಾರು 82 ವರ್ಷ ದಾಟಬಹುದು. ಶಾರದಮ್ಮ ಹೇಳುವಂತೆ ಅವರ ಊರು ಕೊಡಗು ಮಡಿಕೇರಿಯ ಗಾಳಿಬೀಡು ಎಂಬಲ್ಲಿಯಂತೆ, ಸುಮಾರು ಹತ್ತು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಮಳೆಗಾಲದಲ್ಲಿ ಉಂಟಾದ ಭೀಕರ ಮಳೆಗೆ ಭೂಕುಸಿತದಿಂದ ಅವರ ಮನೆಯಿದ್ದ ಜಾಗ ಸಂಪೂರ್ಣ ಭೂ ಕುಸಿತಕ್ಕೆ ಒಳಗಾಯಿತ್ತಂತೆ, ಅವರು ಬೆಳಗ್ಗೆ ಕೆಲಸಕ್ಕೆ ಹೋಗಿ, ಸಂಜೆ ಬರುವಾಗ ಅವರ ಮನೆ ಸಹಿತ ಅವರ ಪೂರ್ತಿ ಜಾಗ ಕುಸಿದು ಹೋಗಿತ್ತು. ಅವರ ಗಂಡ ಮತ್ತು ಮಗ ಮಾತ್ರ ಮನೆಯಲ್ಲಿದ್ದರಂತೆ ಅವರು ಎಲ್ಲಿ ಹೋಗಿದ್ದಾರೆ ಎಂಬ ಬಗ್ಗೆ ವಯೋವೃದ್ಧೆಗೆ ಯಾವುದೇ ಮಾಹಿತಿ ಇಲ್ಲ. ಆ ಸಂದರ್ಭದಲ್ಲಿ ಅಲ್ಲಿ ನಿರಾಶ್ರಿತರಿಗೆ ಮಾಡಿದ ಶಿಬಿರದಲ್ಲಿ ಇವರಿದ್ದರು. ನಂತರ ಇವರ ಜಾಗದಲ್ಲಿ ಸರಕಾರದಿಂದ ಮನೆ ನಿರ್ಮಿಸುವ ಪ್ರಸ್ತಾಪಗಳಿದ್ದರೂ, ಇದು ನೆನಗುದಿಗೆ ಬಿದ್ದಿತ್ತು. ಈ ಎಲ್ಲಾ ಬೆಳವಣಿಗೆಗಳ ನಂತರ ಇವರನ್ನು ಕೇಳುವವರಿಲ್ಲದೆ ಇವರು ಬೀದಿಗೆ ಬೀಳುವಂತಾಯಿತು.
ನಂತರ ಊರೂರು ಅಲೆಯುತ್ತಾ ಅವರು ಬೆಳ್ತಂಗಡಿಗೆ ಬಂದರು. ಕಳೆದ ಹತ್ತು ವರ್ಷಗಳಿಂದ ಇವರು ಬೆಳ್ತಂಗಡಿಯಿಂದ ಲಾಯಿಲದವರೆಗೆ ಅಲೆಯುತ್ತಾ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಲಾಯಿಲಕ್ಕೆ ಬಂದಾಗ ಈ ಅಜ್ಜಿ ರಮೇಶ್ ಅವರ ಕ್ಯಾಂಟೀನ್‌ಗೆ ಬಂದೇ ಹೋಗುತ್ತಿದ್ದರು. ರಮೇಶ್ ಕೋಟ್ಯಾನ್ ಅವರ ಪತ್ನಿ ಗೀತಾರನ್ನು ತನ್ನ ಮಗಳು ಎಂದೇ ಅಜ್ಜಿ ಕರೆಯುತ್ತಿದ್ದರು. ಹೆಚ್ಚಿನ ಅವಧಿಯಲ್ಲಿ ಇವರು ಬೆಳ್ತಂಗಡಿ ಮಾರಿಗುಡಿ ಎದುರು, ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ, ವಿಶೇಷ ಕಾರ್ಯಕ್ರಮಗಳಿದ್ದಾಗ ಸಂಜೆಯವರೆಗೂ ರಸ್ತೆ ಬದಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದರು. ಬೆಳ್ತಂಗಡಿ ಮಾರಿಗುಡಿಗೆ ಬರುವ ಹೆಚ್ಚಿನ ಭಕ್ತರು ಈ ವೃದ್ಧೆಯನ್ನು ಕಂಡವರೇ, ಗ್ರಾಹಕರು ಕೊಡುತ್ತಿದ್ದ ಒಂದು, ಎರಡು ರೂಪಾಯಿಯನ್ನು ಒಟ್ಟು ಸೇರಿಸಿ, ಅದರಿಂದಲೇ ಜೀವನವನ್ನು ನಡೆಸಿಕೊಂಡು ಬರುತ್ತಿದ್ದವರು.


ಇತ್ತಿಚೀನ ದಿನಗಳಲ್ಲಿ ವಯೋ ಸಹಜವಾಗಿ ಅಜ್ಜಿಗೆ ನಡೆಯಲು ಸಾಧ್ಯವಾಗದೆ ದಾರಿಯಲ್ಲಿ ಕುಸಿದು ಬಿದ್ದಿದ್ದು, ಇದನ್ನು ನೋಡಿದ ಯಾರೋ ಪುಣ್ಯತ್ಮರು ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಅಜ್ಜಿಯ ಮನೆಯವರು ಯಾರು ಇಲ್ಲದಿರುವುದರಿಂದ ಸರಿಯಾದ ವ್ಯವಸ್ಥೆಯಾಗದೆ ಅವರನ್ನು ಕೇಳುವವರಿಲ್ಲದ ಸ್ಥಿತಿಯಾಗಿತ್ತು. ನಂತರ ಅಜ್ಜಿ ಯಾರೋ ರಿಕ್ಷಾದವರಲ್ಲಿ ತನ್ನ ಮಗಳ ಹೋಟೆಲ್ ಲಾಯಿಲದಲ್ಲಿದೆ ಎಂದು ಹೇಳಿದ್ದರಿಂದ ರಿಕ್ಷಾದವರು ಅಜ್ಜಿಯನ್ನು ಲಾಯಿಲದ ರಮೇಶ್ ಕೋಟ್ಯಾನ್‌ರವರ ಕ್ಯಾಂಟಿನ್‌ಗೆ ತಂದು ಬಿಟ್ಟಿದ್ದರು.


ಅಜ್ಜಿ ಕುಸಿದು ಬಿದ್ದಿದ್ದರಿಂದ ಅವರ ಸೊಂಟಕ್ಕೆ ಗಂಭೀರ ಏಟು ಬಿದ್ದಿದ್ದು, ನಡೆಯಲಾಗದ ಸ್ಥಿತಿಯಾಗಿತ್ತು. ರಮೇಶ್ ಕೋಟ್ಯಾನ್ ಅವರು ಜೌಷಧಿ ತಂದು ಕೊಟ್ಟರೂ ಗುಣಮುಖರಾಗಲಿಲ್ಲ. ನಂತರ ಅವರು ಉಜಿರೆಯ ಎಸ್‌ಡಿಎಂ ಆಸ್ಪತ್ರೆಗೆ ಅಜ್ಜಿಯನ್ನು ಕರೆದುಕೊಂಡು ಹೋಗಿ ವೈದ್ಯರು ಎಕ್ಸೆರೇ ತೆಗೆದು ನೋಡಿದಾಗ, ಸೊಂಟಕ್ಕೆ ಗಂಭೀರ ಏಟು ಆಗಿದ್ದು, ಆಪರೇಷನ್ ಅಗತ್ಯತೆಯನ್ನು ವೈದ್ಯರು ತಿಳಿಸಿದ್ದರು. ಇದಕ್ಕೆ ರೂ.45 ಸಾವಿರ ವೆಚ್ಚವಾಗುತ್ತದೆ ಎಂದಾಗ ರಮೇಶ್ ಕೋಟ್ಯಾನ್ ಅವರು ಒಪ್ಪಿದ್ದರಿಂದ ಆಪರೇಷನ್ ಆಯಿತು. ಜೌಷಧಿ, ಆಸ್ಪತ್ರೆ ರೂಮ್ ಚಾರ್ಚ್ ಸೇರಿಂದ ಒಟ್ಟು ರಮೇಶ್‌ರಿಗೆ ರೂ.75 ಸಾವಿರ ಖರ್ಚಾಯಿತು. ವೃದ್ಧೆ ಅನಾಥೆ ಎಂಬ ವಿಷಯ ತಿಳಿದು ವೈದ್ಯರು ಅನುಕಂಪದಿಂದ ತಮ್ಮ ವೆಚ್ಚವನ್ನು ತೆಗೆದುಕೊಳ್ಳದೆ ಆಪರೇಷನನ್ನು ಉಚಿತವಾಗಿ ಮಾಡಿದ್ದಾರೆ ಎನ್ನುತ್ತಾರೆ ರಮೇಶ್ ಕೋಟ್ಯಾನ್.


ಕಳೆದ ಎರಡು ತಿಂಗಳಿಂದ ವೃದ್ಧೆ ಶಾರದಮ್ಮರನ್ನು ರಮೇಶ್ ಕೋಟ್ಯಾನ್ ಅವರು ತನ್ನ ಹೋಟೆಲ್‌ನ ಹಿಂಭಾಗದಲ್ಲಿರುವ ರೂಮಿನಲ್ಲಿ ಸಾಕುತ್ತಿದ್ದಾರೆ. ಆಪರೇಷನ್ ಆಗಿರುವುದರಿಂದ ಅಜ್ಜಿಗೆ ಎದ್ದು ನಡೆದಾಡಲು ಈಗ ಸಾಧ್ಯವಾಗುತ್ತಿಲ್ಲ, ಬೆಡ್‌ನಲ್ಲಿ ಎದ್ದು ಕುಳಿತುಕೊಳ್ಳುತ್ತಾರೆ, ಊಟ, ಕಾಫಿ, ತಿಂಡಿಯನ್ನು ಅಲ್ಲಿಗೆ ತಂದು ಕೊಡಬೇಕು, ಜೊತೆಗೆ ನಿತ್ಯಕರ್ಮಗಳನ್ನು ರಮೇಶ್ ಕೋಟ್ಯಾನ್ ಹಾಗೂ ಅವರ ಪತ್ನಿ ಗೀತಾ ಅವರು ಮಾಡುತ್ತಿದ್ದಾರೆ. ಅಜ್ಜಿಯ ಊರು ಕೊಡುಗು ಮಡಿಕೇರಿಯಾಗಿರುವುದರಿಂದ ಅವರ ಪತಿ, ಮಗ ಅಥವಾ ಕುಟುಂಬಸ್ಥರು ಇದ್ದಾರಾ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದೀಗ ಅನಾಥೆಯಾಗಿರುವ ವಯೋವೃದ್ಧ ಅಜ್ಜಿಗೆ ಕೋಟ್ಯಾನ್ ದಂಪತಿ ಬಿಟ್ಟರೇ ಯಾರೂ ಇಲ್ಲದಂತಾಗಿದೆ. ಇವರೇ ಈಗ ಆಸರೆಯಾಗಿದ್ದಾರೆ. ಲಾಯಿಲ ಗ್ರಾಮ ಪಂಚಾಯತ್ ಸದಸ್ಯರಾದ ಅರವಿಂದ ಶೆಟ್ಟಿ ಇವರ ಸೇವೆಗೆ ಸಹಕಾರ ನೀಡಿದರು.


(ರಮೇಶ್ ಕೋಟ್ಯಾನ್ ಸಂಪರ್ಕ-9731147946)

ಬಿ.ಎಸ್ ಕುಲಾಲ್

Related posts

ಬೆಳಾಲು ಡಿ.ಪಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಹಾಗೂ ವಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಕಾರ್ಯಕ್ರಮ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಲೋಕಸಭಾ ಚುನಾವಣೆ ದಿನಾಂಕ ಪ್ರಕಟ: ಇಂದಿನಿಂದ ನೀತಿ ಸಂಹಿತೆ ಜಾರಿ: ದ.ಕ. ಲೋಕಸಭಾ ಕ್ಷೇತ್ರದಲ್ಲಿ ಎ. 26ರಂದು ಮತದಾನ

Suddi Udaya

ಬೆಳಾಲು ಪ್ರೌಢಶಾಲೆ ಪೋಷಕರ ಸಮಾವೇಶ

Suddi Udaya

ಗುರುವಾಯನಕೆರೆ: ಮನೆ ಹಾಗೂ ಅಂಗಡಿಗಳಿಗೆ ನುಗ್ಗಿದ ನೀರು: ಕುವೆಟ್ಟು ಗ್ರಾ.ಪಂ. ನಿಂದ ಮೋರಿ ಅಳವಡಿಕೆ, ಚರಂಡಿ ದುರಸ್ತಿ, ಪಂ.ಸದಸ್ಯರ ಮೂಲಕ ಸಮಸ್ಯೆಗೆ ಪರಿಹಾರ

Suddi Udaya

ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದ ಬೈಕ್ : ಇಂದಬೆಟ್ಟು ನಿವಾಸಿ ಜೋಶನ್ ಸ್ಥಳದಲ್ಲೇ ಸಾವು

Suddi Udaya
error: Content is protected !!