ಬೆಳ್ತಂಗಡಿ: ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾನ ದರ್ಶನಕ್ಕಾಗಿ ಬಿಜೆಪಿ ಕಾರ್ಯಕರ್ತರಿಗೆ ಆಯಾ ರಾಜ್ಯದ ನೇತೃತ್ವದಲ್ಲಿ ವಿಶೇಷ ಅವಕಾಶ ಕಲ್ಪಿಸಿದ್ದು ಕರ್ನಾಟಕದಿಂದ ಪ್ರತೀದಿನ 1,500 ಮಂದಿಗೆ ರೈಲಿನ ಮೂಲಕ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಭಕ್ತರಿಗೆ ಮಾರ್ಗದರ್ಶನ ನೀಡಲೆಂದು ಪ್ರತೀ ರಾಜ್ಯದಿಂದ 10 ಮಂದಿಯಂತೆ 270 ಪ್ರಬಂಧಕರನ್ನು ನೇಮಿಸಲಾಗಿದೆ. ರಾಜ್ಯದ ಮೊದಲ 10 ಮಂದಿಯ ತಂಡದಲ್ಲಿ ಬೆಳ್ತಂಗಡಿ ತಾಲೂಕಿನ ಬೆಳಾಲಿನ ಬಿಜೆಪಿ ಮುಖಂಡ ಸೀತಾರಾಮ ಬಿ.ಎಸ್. ರವರು ತಂಡವು ಫೆ 5ರಿಂದ 18ರ ವರೆಗೆ ಸೇವೆ ಸಲ್ಲಿಸುತ್ತಿದೆ.
ಬೆಳಾಲು ಗ್ರಾಮದ ಸೀತಾರಾಮ ಅವರು ಬಿಜೆಪಿ ಬೆಳ್ತಂಗಡಿ ಮಂಡಲದಲ್ಲಿ 2 ಬಾರಿ ಪ್ರಧಾನ ಕಾರ್ಯದರ್ಶಿಯಾಗಿ ಮಂಡಲ ಉಪಾಧ್ಯಕ್ಷರಾಗಿ, ಪ್ರಸಕ್ತ ದ.ಕ. ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದವರೆಗೆ ಈ ಅವಕಾಶವನ್ನು ಭಕ್ತರಿಗೆ ನೀಡಲಾಗಿದ್ದು, 3 ತಂಡಗಳಾಗಿ 30 ಮಂದಿ ಪ್ರಬಂಧಕರು 12 ದಿನಗಳಂತೆ 36 ದಿನ ಸೇವೆ ನೀಡಲಿದ್ದಾರೆ. ಇವರನ್ನು ಉತ್ತರ ಪ್ರದೇಶ ಸರಕಾರದಿಂದ ನಿಯೋಜಿಸಿದ ವ್ಯವಸ್ಥಾ ತಂಡದ ಮಾರ್ಗದರ್ಶನದಡಿ ಜೋಡಿಸಲಾಗಿದೆ.
ವಿಶೇಷತೆಗಳು: ಕರ್ನಾಟಕದಿಂದ ಆಗಮಿಸುವ ಕಾರ್ಯಕರ್ತರಿಗೆ ರೈಲಿನ 3 ಸಾವಿರ ರೂ ಪ್ರಯಾಣ ದರ ಹೊರತುಪಡಿಸಿ ದೇವರ ದರ್ಶನ, ಊಟ, ವಸತಿ ಎಲ್ಲವೂ ಉಚಿತ. ಭಕ್ತರಿಗೆ 100ಕ್ಕೂ ಅಧಿಕ ಸಂಘ-ಸಂಸ್ಥೆಗಳು ದಿನದ ಮೂರೂ ಹೊತ್ತು ಉಚಿತ ಆಹಾರ ಕಲ್ಪಿಸುತ್ತಿವೆ. 6.50 ಲಕ್ಷ ಮಂದಿಗೆ ಪ್ರತಿನಿತ್ಯ ಈ ಸೇವೆ ಲಭ್ಯವಾಗುತ್ತಿದೆ.
ವಸತಿ ವ್ಯವಸ್ಥೆ, ಭಕ್ತರ ವಸತಿಗೆ 4 ಕಿ.ಮೀ. ದೂರದ 2,500 ಎಕ್ರೆಯಲ್ಲಿ 4,500 ಮಂದಿಗೆ ಸ್ಥಳಾವಕಾಶವಿರುವ ಜರ್ಮನ್ ಟೆಂಟ್ ಅಳವಡಿಸಲಾಗಿದೆ. ಒಟ್ಟು 5 ಟೆಂಟ್‌ಗಳಿದ್ದು 22 ಸಾವಿರ ಮಂದಿಗೆ ಏಕಕಾಲದಲ್ಲಿ ವ್ಯವಸ್ಥೆ ಒದಗಿಸುತ್ತಿದೆ. ಪುರುಷ, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಅಲ್ಲಿಂದ ನೇರವಾಗಿ ಶ್ರೀರಾಮನ ದರ್ಶನಕ್ಕೆ ತೆರಳಲು ಉಚಿತ ಎಲೆಕ್ಟಿಕಲ್ ಬಸ್ ಸೇವೆ ಇದೆ.