ಮರೋಡಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಸರ್ಕಾರಿ ಶಾಲೆಗಳಿಗೆ ಕೊಠಡಿಗಳನ್ನು ನಿರ್ಮಿಸುವ ವಿವೇಕ ಯೋಜನೆಯನ್ನು ಈಗಿನ ರಾಜ್ಯ ಸರ್ಕಾರ ಮತ್ತೆ ಜಾರಿಗೆ ತರಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆಗ್ರಹಿಸಿದರು.
ಬೆಳ್ತಂಗಡಿ ತಾಲೂಕಿನ ಮರೋಡಿಯ ಕೂಕ್ರಬೆಟ್ಟು ಸರ್ಕಾರಿ ಕನ್ನಡ ಮತ್ತು ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ರೂ. 1.10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಐದು ವರ್ಷದ ಹಿಂದೆ ಮಕ್ಕಳಿಲ್ಲದ ಶಾಲೆಗೆ ಅನುದಾನ ಯಾಕೆ ನೀಡಬೇಕು ಎಂದು ಸಮಿತಿಯವರಲ್ಲಿ ಹೇಳಿದ್ದೆ. ಮಕ್ಕಳಿಲ್ಲದೆ ಮುಚ್ಚುವ ಹಂತದಲ್ಲಿದ ಸರ್ಕಾರಿ ಶಾಲೆಯನ್ನು ಸವಾಲಾಗಿ ಸ್ವೀಕರಿಸಿ ಮಕ್ಕಳ ದಾಖಲಾತಿ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದ ನಿಮ್ಮ ಪ್ರಯತ್ನ ರಾಜ್ಯಕ್ಕೆ ಮಾದರಿ ಆಗಿದೆ. ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಜತೆ ಶಾಲಾಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಶಿಕ್ಷಕರು ಹಾಗೂ ದಾನಿಗಳು ಜತೆಗೂಡಿ ಗ್ರಾಮೀಣ ಭಾಗದಲ್ಲಿ ಸುಂದರವಾದ ವಿದ್ಯಾದೇಗುಲ ನಿರ್ಮಾಣ ಅವಿಸ್ಮರಣೀಯವಾಗಿದೆ. ಶಾಲೆಯ ಮೂಲ ಸೌಲಭ್ಯಕ್ಕೆ ಮತ್ತಷ್ಟು ಅನುದಾನ ಒದಗಿಸಲು ಬದ್ಧನಾಗಿದ್ದೇನೆ ಎಂದರು.
ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ ಬುಣ್ಣಾನ್ ಅಧ್ಯಕ್ಷತೆ ವಹಿಸಿದ್ದರು.
ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಮರೋಡಿ ಬೆಳ್ಳಿಬೀಡು ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಆಡಳಿತ ಮೊಕ್ತೇಸರ ಹೇಮರಾಜ್ ಕೆ. ಬೆಳ್ಳಿಬೀಡು, ನಿವೃತ್ತ ಅಧ್ಯಾಪಕ ಎಂ.ಕೆ. ಆರಿಗ ಗಾಳಿವನ, ಕಲ್ಲೇರಿ ಶ್ರೀ ಕುಕ್ಕಿನಂತಾಯ ದೈವಸ್ಥಾನದ ಅಧ್ಯಕ್ಷ ಪ್ರವೀಣ್ ಭಟ್ ಕಾನಂಗಿ, ಮಂಗಳೂರು ಮಾಸ್ಟರ್ ಫ್ಲವರ್ ನ ಫಕೀರಬ್ಬ ಮರೋಡಿ, ಶಿರ್ತಾಡಿ ಪ್ರಭಾ ಕ್ಲಿನಿಕ್ ನ ಡಾ. ಆಶೀರ್ವಾದ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಯಶೋಧರ ಬಂಗೇರ, ಮುಖ್ಯ ಶಿಕ್ಷಕಿ ಸುಫಲ, ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಕಾರ್ಯದರ್ಶಿ ನಾರಾಯಣ ಪೂಜಾರಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಶ್ ಮರೋಡಿ, ಕಾರ್ಯದರ್ಶಿ ಮುಕೇಶ್ ಹೆಗ್ಡೆ ಎಸ್ ಡಿಎಂಸಿ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕ ವರ್ಗ, ಪೋಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ:ನೂತನ ಶಾಲಾ ಕಟ್ಟಡಕ್ಕೆ ಅನುದಾನ ಒದಗಿಸಿದ ಶಾಸಕ ಹರೀಶ್ ಪೂಂಜ, ಶಾಲೆಯ ಪುನರ್ ಚೇತನಕ್ಕೆ ಶ್ರಮಿಸಿದ ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ವಿವಿಧ ರೀತಿಯ ಕೊಡುಗೆ ನೀಡಿರುವ ದೇವೇಂದ್ರ ಹೆಗ್ಡೆ ಕೊಕ್ರಾಡಿ, ರತ್ನಾಕರ ಬುಣ್ಣಾನ್, ಪ್ರದೀಶ್ ಮರೋಡಿ, ಹೇಮರಾಜ್ ಕೆ. ಬೆಳ್ಳಿಬೀಡು, ಸುಫಲ, ಸೋನಿಯಾ ಸತೀಶ್, ಯಶೋಧರ ಬಂಗೇರ, ಎಂ.ಕೆ. ಆರಿಗ ಹಾಗೂ ಸಚಿನ್ ಜೈನ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಬಜಿರೆ ಶಾಲೆಗೆ ವರ್ಗಾವಣೆಗೊಂಡಿರುವ ಸಹಶಿಕ್ಷಕಿ ಹರ್ಷಲಾ ಅವರನ್ನು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸ.ಶಾ.ಉ.ಬೆ. ಸಮಿತಿ ಅಧ್ಯಕ್ಷ ಜಯಂತ್ ಕೋಟ್ಯಾನ್ ಪ್ರಸ್ತಾವಣೆಗೈದು ಸ್ವಾಗತಿಸಿದರು. ಶಿಕ್ಷಕ ಕೆ. ಧರಣೇಂದ್ರ ಜೈನ್ ನಿರೂಪಿಸಿದರು. ಮುಖ್ಯ ಶಿಕ್ಷಕಿ ವರದಿ ವಾಚಿಸಿದರು. ಯಶೋಧರ ಬಂಗೇರ ವಂದಿಸಿದರು.
ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು ಮತ್ತು ಶಾಲಾ ಮಕ್ಕಳಿಂದ ಮಣಿಕಂಠ ಮಹಿಮೆ ಯಕ್ಷಗಾನ ಪ್ರದರ್ಶನಗೊಂಡಿತು.ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ನೂತನ ಧ್ವಜಸ್ತಭ ಕಟ್ಟೆಯನ್ನು ದೇವೇಂದ್ರ ಹೆಗ್ಡೆ ಕೊಕ್ರಾಡಿ ಉದ್ಘಾಟಿಸಿದ್ದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.