ಬೆಳ್ತಂಗಡಿ: ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾಪುರುಷರ ಜಯಂತಿ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇವರ ಸಹಕಾರದೊಂದಿಗೆ ‘ಸಂತ ಕವಿ ಸವ೯ಜ್ಞ’ ಜಯಂತಿ ಕಾರ್ಯಕ್ರಮ ಫೆ. 20 ರಂದು ತಾಲೂಕು ಆಡಳಿತ ಸೌಧ ಸಭಾಂಗಣ, ಬೆಳ್ತಂಗಡಿಯಲ್ಲಿ ಜರುಗಿತು.
ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂತಕವಿ ಸರ್ವಜ್ಞರ ಸಂದೇಶಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದ್ದು, ನಾವೆಲ್ಲರೂ, ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬೆಳ್ತಂಗಡಿಯ ಯುವ ವಕೀಲರಾದ ಉದಯ ಬಿ.ಕೆ ಬಂದಾರು ಅವರು ತ್ರಿಪದಿ ಕವಿ ಸವ೯ಜ್ಞನ ಕವಿಯ ಹುಟ್ಟು, ಬೆಳವಣಿಗೆ, ಅವರ ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ತಿಳಿಸಿದರು. ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಉಪಾಧ್ಯಕ್ಷ ಹೆಚ್. ಪದ್ಮಕುಮಾರ್ ಮಾತನಾಡಿ ಕವಿ ಸರ್ವಜ್ಞರ ಸಾಹಿತ್ಯವನ್ನು ಮಕ್ಕಳಿಗೆ ಕಲಿಸಬೇಕು ಎಂದು ತಿಳಿಸಿದರು. ತಹಶೀಲ್ದಾರ್ ಪೃಥ್ವಿ ಸಾನಿಕಂ ಕಾರ್ಯಕ್ರಮಕ್ಕೆ ಶುಭ ಕೋರಿದರು.
ವೇದಿಕೆಯಲ್ಲಿ ಕುಲಾಲ ಕುಂಬಾರರ ಯುವ ವೇದಿಕೆ, ಅಧ್ಯಕ್ಷ ಉಮೇಶ್ ಕುಲಾಲ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು. ಕಾಯ೯ಕ್ರಮದಲ್ಲಿ ಮೂಲ್ಯರ ಯಾನೆ ಕುಂಬಾರರ ಸೇವಾ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿರಾಸ್ತೇದಾರ್ ರವಿಕುಮಾರ್ ಮತ್ತು ಆಹಾರ ನಿರೀಕ್ಷಕ ವಿಶ್ವ ನಾಡಗೀತೆ ಹಾಡಿದರು. ತಾಲೂಕು ಕಚೇರಿ ಉದ್ಯೋಗಿ ಹೇಮಾ ಸ್ವಾಗತಿಸಿ, ನಿರೂಪಿಸಿ. ವಂದಿಸಿದರು.