ಬೆಳ್ತಂಗಡಿ ತಾಲ್ಲೂಕಿನ 76 ಕೆರೆಗಳ ಗಡಿ ಗುರುತಿಸಿ ಗ್ರಾಮ ಪಂಚಾಯಿತ್ ಹಾಗೂ ಪಟ್ಟಣ ಪಂಚಾಯತ್ ಹಸ್ತಾಂತರ: ವಿಧಾನ ಪರಿಷತ್ ನಲ್ಲಿ ಹರೀಶ್ ಕುಮಾರ್ ಪ್ರಶ್ನೆಗೆ ಸಚಿವರ ಉತ್ತರ

Suddi Udaya

ಬೆಳ್ತಂಗಡಿ: ರಾಜ್ಯದಲ್ಲಿ ನೀರಿನ ಆಶ್ರಯಕ್ಕೆ ಪಾರಂಪರಿಕವಾಗಿ ನಿರ್ಮಿಸಿದ ಬಹುತೇಕ ಕೆರೆಗಳು ರಾಜ್ಯಾದ್ಯಂತ ಒತ್ತುವರಿಗೊಂಡು ಕಟ್ಟಡ ಹಾಗೂ ಕೃಷಿಯೇತರ ಚಟುವಟಿಕೆಯ ಪಾಲಾಗಿರುವುದು ನಿಜವೇ; ಕೆರೆಗಳ ಒತ್ತುವರಿ ತೆರವಿಗೆ ಲೋಕಾಯುಕ್ತವು ಸೋಮೋಟೋ ಅಸ್ತ್ರ ಉಪಯೋಗಿಸಿದ್ದು ಬೆಳ್ತಂಗಡಿ ತಾಲ್ಲೂಕಿಗೆ ಸಂಬಂಧಿಸಿದಂತೆ ಪಟ್ಟಣ ಹಾಗೂ ತಾಲ್ಲೂಕಿನ 81 ಗ್ರಾಮಗಳಲ್ಲಿ ಸದ್ಯ 76 ಸಾರ್ವಜನಿಕ ಕೆರೆಗಳಿದ್ದು ಸದರಿ ಕೆರೆಗಳ ಒತ್ತುವರಿ ತಡೆಯುವ ನಿಟ್ಟಿನಲ್ಲಿ ಸರ್ಕಾರವು ಕೈಗೊಂಡ ಕ್ರಮಗಳೇನು? ಎಂದು ವಿಧಾನಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಕಂದಾಯ ಸಚಿವರಿಗೆ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ಭೂ ಕಬಳಿಕೆ ಮತ್ತು ಕೆರೆ ಒತ್ತುವರಿ ಮಾಡಿರುವವರ ವಿರುದ್ಧ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 192 (ಎ) (1) ರಂತೆ ಕ್ರಮ ಕೈಗೊಂಡು ಒತ್ತುವರಿಯನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಬೆಳ್ತಂಗಡಿ ತಾಲ್ಲೂಕಿಗೆ ಸಂಬಂದಿಸಿದಂತೆ ಒತ್ತುವರಿ ಕಟ್ಟಡ ಇರುವುದಿಲ್ಲ ಹಾಗೂ ಕೃಷಿಯೇತರ ಚಟುವಟಿಕೆಗಳ ಪಾಲಾಗುತ್ತಿರುವುದಿಲ್ಲ. ಸದರಿ ಕೆರೆಗಳ ತೆರವಿಗೆ ಲೋಕಾಯುಕ್ತವು ಸ್ವಂಪ್ರೇರಿತ ದೂರು ದಾಖಲಿಸಿದ್ದು, ಈ ಸಂಬಂಧ ಬೆಳ್ತಂಗಡಿ ತಾಲ್ಲೂಕಿನ 76 ಕೆರೆಗಳ ಗಡಿ ಗುರುತಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿಸಿದರು.

Leave a Comment

error: Content is protected !!