25.7 C
ಪುತ್ತೂರು, ಬೆಳ್ತಂಗಡಿ
May 17, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮೂಡಿಗೆರೆ ಜಾವಳಿ ಸಮೀಪ ತೋಟದ ಮನೆ ದರೋಡೆ ಪ್ರಕರಣ ; ಬೆಳ್ತಂಗಡಿಯ ಖಲಂದರ್ ಆಲಿಯಾಸ್ ಮೊಹಮ್ಮದ್ ಗೌಸ್, ಸೇರಿದಂತೆ ಐವರು ದರೋಡೆಕೋರರ ಬಂಧನ

ಬೆಳ್ತಂಗಡಿ: ಮೂಡಿಗೆರೆ ತಾಲ್ಲೂಕಿನ ಜಾವಳಿ ಸಮೀಪ ತೋಟದ ಮನೆಯೊಂದಕ್ಕೆ ನುಗ್ಗಿ ಮನೆಯವರ ಮೇಲೆ ಹಲ್ಲೆನಡೆಸಿ ಹಣ ಆಭರಣ ದೋಚಿದ್ದ ಪ್ರಕರಣದಲ್ಲಿ ದರೋಡೆಕೋರರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ಕೆಲವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಫೆ.15 ರಂದು ರಾತ್ರಿ ಸುಮಾರು 8-15 ಗಂಟೆಯ ಸಮಯದಲ್ಲಿ ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ಜೆ.ಹೊಸಳ್ಳಿ ಗ್ರಾಮದ ಅನಂತರಾಮ್ ಎಂಬುವವರ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದವರಿಗೆ ಖಾರದ ಪುಡಿ ಎರಚಿ, ಮನೆಯವರಿಗೆಲ್ಲಾ ಹೆದರಿಸಿ, ತಡೆಯಲು ಬಂದ ಶ್ರೀನಿವಾಸಮೂರ್ತಿ ಎಂಬ ಕೆಲಸಗಾರರಿಗೆ ಕತ್ತಿ ಚಾಕುವಿನಿಂದ ಹಲ್ಲೆ ಮಾಡಿ ಮಾರಣಾಂತಿಕವಾದ ಗಾಯ ಮಾಡಿ, ಮನೆಯಲ್ಲಿದ್ದ ಟಿ.ವಿ.ಗಳನ್ನು ಒಡೆದು ಹಾಕಿ ಗಾರ್ಡೇಜ್ ಬೀರುವಿನಲ್ಲಿದ್ದ 5,25,000/- ರೂ. ನಗದು ಮತ್ತು 1,25,000/- ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದರು. ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಮೊ.ನಂ:05/2024 ಕಲಂ 395, 397, 427, 450 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ ಅನ್ಸರ್ ಆಲಿಯಾಸ್ ಅಂಚು, ಬೆಳ್ತಂಗಡಿ ಮೂಲದ ಖಲಂದರ್ ಆಲಿಯಾಸ್ ಮೊಹಮ್ಮದ್ ಗೌಸ್, ಮೂಡಿಗೆರೆ ತಾಲ್ಲೂಕು ಬೆಟ್ಟದಮನೆ ಗ್ರಾಮದ ಶೈನಿಂಗ್ ಕುಮಾರ್ ಆಲಿಯಾಸ್ ಶೈನಿ, ಅಣಜೂರು ಗ್ರಾಮದ ಅಶ್ರಫ್ ಆಲಿಯಾಸ್ ಹಸರಬ್, ಜನ್ನಾಪುರ ಗ್ರಾಮದ ಉಮೇಶ್ ಬಂಧಿತರು.

ಇವರಲ್ಲಿ ಅನ್ಸರ್ ಎಂಬಾತ ದರೋಡೆ ನಡೆಸಿ ಎಸ್ಕೇಪ್ ಆಗುವಾಗ ಕತ್ತಲೆಯಲ್ಲಿ ದಾರಿ ತಪ್ಪಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದ, ಉಳಿದವರು ದರೋಡೆ ಮಾಡಿ ಬೇರೆ ಬೇರೆ ದಿಕ್ಕಿಗೆ ತೆರಳಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಒಬ್ಬೊಬ್ಬರೇ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ. ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿಯಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕಾಫಿ ವ್ಯಾಪಾರಕ್ಕೆ ಬಂದು ದರೋಡೆಗೆ ಸ್ಕೆಚ್ : ಸದರಿ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಟ್ಟದಮನೆ ಮೂಲದ ಶೈನಿಂಗ್ ಕುಮಾರ್ ಎಂಬಾತ ಕಾಫಿ ವ್ಯಾಪಾರಿಯಾಗಿದ್ದು ದರೋಡೆ ನಡೆದ ಅನಂತ ಹೆಬ್ಬಾರ್ ಅವರ ಮನೆಯಿಂದ ಕಾಫಿ ಖರೀದಿಸುತ್ತಿದ್ದ ಎಂದು ತಿಳಿದುಬಂದಿದೆ. ಅವನೇ ಈ ಮನೆಯನ್ನು ದರೋಡೆಗೆ ಟಾರ್ಗೆಟ್ ಮಾಡಿ ಉಳಿದವರನ್ನು ಒಟ್ಟು ಸೇರಿಸಿ ಈ ಕೃತ್ಯಕ್ಕೆ ಮುಂದಾಗಿದ್ದ ಎನ್ನಲಾಗಿದೆ.

ಇವರೆಲ್ಲರೂ ದರೋಡೆ ಮಾಡುವ ಹಿಂದಿನ ದಿನ ಕೊಟ್ಟಿಗೆಹಾರದ ಅನಿಲ್ ಲಾಡ್ಜ್ ನಲ್ಲಿ ತಂಗಿದ್ದರು ಎನ್ನಲಾಗಿದೆ. ಇವರೆಲ್ಲಾ ಇಸ್ಪೀಟ್ ಆಟದ ಗ್ಯಾಂಗ್ ನಲ್ಲಿ ಪರಸ್ಪರ ಪರಿಚಯಸ್ಥರು ಎಂದು ತಿಳಿದುಬಂದಿದೆ.
ದರೋಡೆ ಮಾಡಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿರುತ್ತದೆ.

ಸದರಿ ಪ್ರಕರಣದ ಡಾ|| ವಿಕ್ರಂ ಆಮಟೆ, ಪೊಲೀಸ್ ಅಧೀಕ್ಷಕರ ಅವರ ಮಾರ್ಗದರ್ಶನದಲ್ಲಿ ಅಡಿಸನಲ್ ಎಸ್ಪಿ ಗಳಾದ ಯೋಗೇಂದ್ರನಾಥ್ ಮತ್ತು ಡಿ.ವೈ.ಎಸ್ಪಿ ಶೈಲೇಂದ್ರ ಹೆಚ್.ಎಂ. ಅವರ ಮಾರ್ಗದರ್ಶನದಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆಯಲ್ಲಿ ದಿಲೀಪ್ ಕುಮಾರ್ ಪಿ.ಎಸ್.ಐ ಬಾಳೂರು, ಶ್ರೀನಾಥ್ ರೆಡ್ಡಿ, ಪಿ.ಎಸ್.ಐ ಮೂಡಿಗೆರೆ, ಹರ್ಷವರ್ಧನ್, ಪಿ.ಎಸ್.ಐ ಗೋಣಿಬೀಡುರ ವರೊಂದಿಗೆ ಮೂಡಿಗೆರೆ ವೃತ್ತ ಕಚೇರಿಯ ಸಿ.ಟಿ.ರಮೇಶ್, ಗಿರೀಶ್ ಬಿ.ಸಿ, ಬಾಳೂರು ಠಾಣಾ ಸಿಬ್ಬಂದಿಗಳಾದ ವಿಶ್ವನಾಥ್ ಎ.ಎಸ್.ಐ, ನಂದೀಶ್, ರಾಜೇಂದ್ರ, ವಸಂತ್, ಓಂಕಾರನಾಯ್ಕ, ಸತೀಶ್, ಮಹೇಶ್, ಅನಿಲ್, ಮನು ರವರುಗಳ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ತ್ವರಿತಗತಿಯಲ್ಲಿ ವಿವಿಧ ಆಯಾಮಗಳಿಂದ ಆರೋಪಿಗಳ ಮಾಹಿತಿ ಸಂಗ್ರಹಿಸಿ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Related posts

ನವೀಕೃತ ಯೂನಿಯನ್ ಬ್ಯಾಂಕ್ ಉಜಿರೆ ಶಾಖೆಯ ಉದ್ಘಾಟನೆ

Suddi Udaya

ಬೆಳಾಲು ಗ್ರಾ.ಪಂ. ನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

Suddi Udaya

ಓಡಿಲ್ನಾಳ: ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ ಸಹಕಾರ ಭಾರತಿ ನೂತನ ಅಧ್ಯಕ್ಷರಾಗಿ ವೆಂಕಪ್ಪಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ರೈ ಆಯ್ಕೆ

Suddi Udaya

ಎಸ್.ಎಸ್.ಎಫ್ ಬೆಳ್ತಂಗಡಿ ಡಿವಿಷನ್ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ “ಎನೇಲ್ ಗೊಬ್ಬು” ಕ್ರೀಡಾಕೂಟ

Suddi Udaya
error: Content is protected !!