ನೆರಿಯ : ಇಲ್ಲಿಯ ಗ್ರಾಮ ಪಂಚಾಯತದ 2023-24ನೇ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಫೆ.29ರಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಸಂತಿ ಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಪಶು ವೈದ್ಯಾಧಿಕಾರಿ ಯತೀಶ್ ರವರು ಭಾಗವಹಿಸಿ ಗ್ರಾಮ ಸಭೆಯನ್ನು ಮುನ್ನಡೆಸಿದರು.
ರುದ್ರಭೂಮಿಯ ವಿಚಾರವಾಗಿ ಪ್ರಾರಂಭವಾದ ಚರ್ಚೆಗಳು ತೀವ್ರ ಗೊಂದಲವನ್ನು ಸೃಷ್ಟಿ ಮಾಡಿದ್ದೂ, ಈ ವಿಚಾರದ ನಿರ್ಣಯವಾಗದೆ ಗ್ರಾಮ ಸಭೆ ನಡೆಸುವುದಕ್ಕೆ ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ವಾದ ವಿವಾದಗಳ ನಡುವೆ ಕೆಲವೊಂದು ಗ್ರಾಮಸ್ಥರು ಸಭೆಯ ನಡುವೆ ತೆರಳಿದರು.
ಕಳೆದ ಗ್ರಾಮಸಭೆಯಲ್ಲಿ ರುದ್ರಭೂಮಿಗೆ ಬೇಡಿಕೆ ಇಟ್ಟಿದ್ದು ಈವರೆಗೆ ಅದು ಆಗದೆ ಇರುವುದು ಹಾಗೂ ಯೋಗ್ಯವಲ್ಲದ ಸ್ಥಳದಲ್ಲಿ ಗಡಿಗುರುತು ಮಾಡಿರುವುದನ್ನು ಗ್ರಾಮಸ್ಥರು ವಿರೋಧಿಸಿ ಚರ್ಚೆಗಳನ್ನು ನಡೆಸಿದರು.
ಗ್ರಾಮ ಪಂಚಾಯತ್ ಸದಸ್ಯರುಗಳ ನಡುವೆಯೇ ಸರಿಯಿಲ್ಲ, ಎಷ್ಟೋ ವರ್ಷದಿಂದ ನೀರೇ ಬಾರದ ಮನೆಗಳಿಗೆ ಬಿಲ್ಲು ಬಂದಿದೆ, ಬಡ, ಮಧ್ಯಮ ಜನರು ಎಲ್ಲಿಂದ ಕೊಡಬೇಕು, ನೀರಿನ ಸಮಸ್ಯೆ ಬಗೆಹರಿಸದೆ ಯಾವ ರೀತಿಯಲ್ಲಿ ಬಿಲ್ಲನ್ನು ಕೇಳುತ್ತೀರಿ ಎಂದು ಗ್ರಾಮಸ್ಥರು ಕೇಳಿದರು.
ಸರಕಾರಿ ಆಸ್ಪತ್ರೆಯಲ್ಲಿ 10 ಗಂಟೆಯಾದರು ಸಿಬ್ಬಂದಿಗಳು ಬರುವುದಿಲ್ಲ. ಆಸ್ಪತ್ರೆಯಲ್ಲಿ ವ್ಯವಸ್ಥೆಗಳು ಸರಿಯಿಲ್ಲ, ಆಂಬುಲೆನ್ಸ್ ನಲ್ಲೂ ಬೇಕಾದ ವ್ಯವಸ್ಥೆಗಳಿಲ್ಲ ಎಂದು ಆರೋಗ್ಯ ಇಲಾಖೆಗೆ ಆಗ್ರಹಿಸಿದರು.
ನೆರಿಯ ಗ್ರಾಮಕ್ಕೆ ಹೆಚ್ಚುವರಿ ಲೈನ್ ಮ್ಯಾನ್ ಬೇಕು, ಕಾಮಗಾರಿ ನಡೆಯುವ ಸ್ಥಳಕ್ಕೆ ಸದಸ್ಯರು ಬೇಟಿ ನೀಡಬೇಕು. ಮುಂದಿನ ಗ್ರಾಮ ಸಭೆಯಲ್ಲಿ ಪ್ರತಿಯೊಂದು ಅಧಿಕಾರಿಗಳು ಹಾಜರಿರಬೇಕು ಹಾಗೂ ಗ್ರಾಮಸ್ಥರ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ಗ್ರಾಮಸಭೆ ನಡೆಸುವುದಕ್ಕೆ ಬಿಡುವುದಿಲ್ಲ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಉಪಾಧ್ಯಕ್ಷರಾದ ಶ್ರೀಮತಿ ಸಜಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಮ ಎ.ಎಸ್, ಸದಸ್ಯರುಗಳು, ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಕಾರ್ಯದರ್ಶಿ ಅಜಿತ್ ಎಂ.ಬಿ ಸ್ವಾಗತಿಸಿ, ಮಧುಮಾಲ ರವರು ಅನುಪಾಲನ ವರದಿ ಮಂಡಿಸಿದರು.