ಬೆಳ್ತಂಗಡಿ: ಎಟಿಎಂನಿಂದ ಹಣ ಪಡೆಯುವ ಬಗ್ಗೆ ಗೊತ್ತಿಲ್ಲದ ವ್ಯಕ್ತಿ, ಅಪರಿಚಿತನಲ್ಲಿ ಹಣ ತೆಗೆದುಕೊಡುವಂತೆ ಎಟಿಎಂ ಕಾರ್ಡ್, ಪಿನ್ ನಂಬರ್ ನೀಡಿದ್ದು, ಎಟಿಎಂ ಕಾರ್ಡ್ ಬದಲಾಯಿಸಿ ವಾಪಾಸು ನೀಡಿದ ವ್ಯಕ್ತಿಬಳಿಕ ಖಾತೆಯಿಂದ 1 ಲಕ್ಷಕ್ಕೂ ಅಧಿಕ ರೂ.ಲಪಟಾಯಿಸಿದ ಘಟನೆ ನಡೆದಿದೆ.
ಮೆಲಂತಬೆಟ್ಟು ಗ್ರಾಮದ ಶರೀಫ್ (53) ಎಂಬವರ ದೂರಿನಂತೆ, ಬೆಳ್ತಂಗಡಿ ಕಸಬಾ ಗ್ರಾಮದ ರಾಷ್ಟ್ರೀಕೃತ ಬ್ಯಾಂಕು ಒಂದರ ಎಟಿಎಂ ನಿಂದ ಹಣ ತೆಗೆಯಲು ಜ.11ರಂದು ತೆರಳಿದ್ದು, ಎಟಿಎಂ ಕಾರ್ಡ್ ಬಳಕೆಯ ಬಗ್ಗೆ ತಿಳಿಯದೇ ಇದ್ದುದರಿಂದ,ಅಲ್ಲೇ ಪಕ್ಕದಲ್ಲಿರುವ ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ನೀಡಿ,ಎ.ಟಿ.ಎಂ.ಪಿನ್ ನಂಬರ್ ತಿಳಿಸಿ ಹಣ ತೆಗೆದುಕೊಡುವಂತೆ ವಿನಂತಿಸಿಕೊಂಡಿದ್ದು, ಅಪರಿಚಿತ ವ್ಯಕ್ತಿಯು 3,000ರೂ.ಗಳನ್ನು ಎ.ಟಿ.ಎಂ.ಮಿಷನ್ ನಿಂದ ತೆಗೆದು ನೀಡಿರುತ್ತಾನೆ. ಮೂರು ದಿನಗಳ ನಂತರ ಇವರ ಖಾತೆಯಿಂದ ರೂ 1,05,300 ರೂ. ಕಡಿತವಾಗಿರುವ ವಿಚಾರ ತಿಳಿದುಬಂದಿದೆ.
ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ, ಅಪರಿಚಿತ ವ್ಯಕ್ತಿ ಎಟಿಎಂ ಕಾರ್ಡ್ ಬದಲಾಯಿಸಿ ನೀಡಿರುವುದು ತಿಳಿದುಬಂದಿರುತ್ತದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.